ತುಮಕೂರು : ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಕಾರ್ ರೇಸ್ ಆಯೋಜಿಸಲಾಗಿತ್ತು.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಅರಣ್ಯ ಭಾಗ ಹಾಗೂ ಬೊಮ್ಮರಸನಹಳ್ಳಿ, ವಿರುಪಾಕ್ಷಿ ಪುರ ಸೇರಿದಂತೆ ಕಾಡಿನ ಮಧ್ಯದಲ್ಲಿ ನೂರಾರು ಕಿ. ಮೀ ವೇಗದಲ್ಲಿ ಕಾರುಗಳು, ಜಿಪ್ಸಿಗಳು ನುಗ್ಗಿ ಅದರ ಹಿಂದೆ ಧೂಳು ಎಬ್ಬಿಸುತ್ತಾ ಸಾಗಿದ್ದು, ಸ್ಥಳೀಯರು ಸೀಟಿ ಹೊಡೆದು ಹುರಿದುಂಬಿಸುತ್ತಿದ್ದರು.
ನಿನ್ನೆ (ಶನಿವಾರ)ಯಿಂದ ತಾಲೂಕಿನ ನಿಟ್ಟೂರು ಭಾಗದಲ್ಲಿ ರೇಸ್ ನಡೆಯುತ್ತಿದೆ. ಸುಮಾರು 56 ವಿಶೇಷವಾದ ಕಾರುಗಳು ಮಣ್ಣಿನ ರಸ್ತೆ, ಬೆಟ್ಟ ಗುಡ್ಡ, ಅರಣ್ಯ ಭಾಗದಲ್ಲಿ ರಭಸವಾಗಿ ಸಂಚರಿಸಿದವು. ದೇಶದ ವಿವಿಧ ರಾಜ್ಯಗಳಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಾಲಕರು ಕಾರು ಚಾಲನೆ ಮಾಡುತ್ತಿದ್ದಾರೆ.
ಕೆ.ಪಿ ಅರವಿಂದ್ ಭಾಗಿ : ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೆ.ಪಿ ಅರವಿಂದ್ ಕೂಡ ಈ ರೇಸ್ನಲ್ಲಿ ಭಾಗಿಯಾಗಿದ್ದಾರೆ. ಅವರನ್ನು ನೋಡಲು ಗ್ರಾಮಾಂತರ ಭಾಗದ ಜನಸಾಗರವೇ ಸೇರಿತ್ತು.
ಕಳೆದ 45 ವರ್ಷಗಳಿಂದ ಪ್ರತಿ ವರ್ಷ ಇದೇ ಭಾಗದಲ್ಲಿ ಕಾರ್ ರೇಸ್ ನಡೆಸಲಾಗುತ್ತಿದೆ. ಆದರೆ, ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಕಾರ್ ರೇಸ್ ನಡೆದಿರಲಿಲ್ಲ. ಮತ್ತೆ ಈ ವರ್ಷ ಆರಂಭವಾಗಿದ್ದು, ಸ್ಥಳೀಯ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.