ತುಮಕೂರು : ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುತಿತ್ತು. ಈ ಸಂದರ್ಭದಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದು
10 ಮಂದಿ ಗಾಯಗೊಂಡಿದ್ದಾರೆ. ಕೆಲವರನ್ನು ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಾಥಮಿಕ ಆರೋಗ್ಯದಲ್ಲಿ ಚಿಕಿತ್ಸೆ ನೀಡಿದ್ದರೂ ತೀವ್ರ ಅಸ್ವಸ್ಥಗೊಂಡಿದ್ದ ಮೂವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಲಾಯಿತು. ಚಿಕ್ಕಯಲ್ಕೂರು ಗ್ರಾಮದ ಯುವಕ ಅಶೋಕ್ ಮತ್ತು ತಿಪ್ಪಗೊಂಡನಹಳ್ಳಿ ಗ್ರಾಮದ ರಾಮಣ್ಣ ಎಂಬುವರಿಗೆ ಹೆಚ್ಚು ಗಾಯಗಳಾಗಿದ್ದು, ಪಟ್ಟಣದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಧ್ಯಮದವರು ಕೂಡಾ ಆಸ್ಪತ್ರೆಗೆ ದಾಖಲು: ಘಟನೆಯಲ್ಲಿ ಮಾಧ್ಯಮದವರು ಕೂಡಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಗಿರಿ ನ್ಯೂಸ್ನ ಶಿವಕುಮಾರ್ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜಾಮನ ವರದಿಗಾರ ಎಂ.ಎಸ್.ರಘುನಾಥ್ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೂ ಮುನ್ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಗಮಿಸಬೇಕಾಗಿತ್ತು. ಪಕ್ಕದ ಮರಗಳಲ್ಲಿದ್ದ ಹೆಜ್ಜೇನು ಗೂಡಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದರಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸುಮಾರು 20 ರಿಂದ 30 ಜನರಿಗೆ ಹೆಜ್ಜೇನುಗಳು ಕಚ್ಚಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಜ್ಜೇನು ದಾಳಿ: ಪೊಲೀಸ್ ಪಬ್ಲಿಕ್ ಶಾಲೆಯ ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮ ದಳ