ತುಮಕೂರು: ಕೊರೊನಾ ಸಂಕಷ್ಟದ ನಡುವೆಯೂ ಬೆಳೆ ಸಾಲ ಮಂಜೂರು ಮಾಡಲು ರೈತರೊಬ್ಬರಿಂದ 3000 ರೂ. ಲಂಚ ಪಡೆಯುತ್ತಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬೇಡತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಿ.ಡಿ.ಅವಲಮೂರ್ತಿ ಲಂಚ ಪಡೆಯುತ್ತಿದ್ದ ಆರೋಪಿಯಾಗಿದ್ದಾನೆ.
ಮಧುಗಿರಿ ತಾಲೂಕು ಎಲೆತಿಮ್ಮನಹಳ್ಳಿಯ ರೈತರೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿಗೆ ಬೆಳೆ ಸಾಲ ಮಂಜೂರು ಮಾಡಿಕೊಡುವಂತೆ ಕಾರ್ಯದರ್ಶಿಗೆ ಮನವಿ ಮಾಡಿದ್ದರಂತೆ. 50 ಸಾವಿರ ರೂ. ಬೆಳೆ ಸಾಲ ಮಂಜೂರು ಮಾಡಲು 3000 ಸಾವಿರ ರೂ. ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಇಂದು ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದೆ.
ಅಲ್ಲದೆ ಇನ್ನೂ 2000 ರೂ. ಲಂಚದ ಹಣ ಕೊಡುವಂತೆ ಕಾರ್ಯದರ್ಶಿ ಈ ವೇಳೆ ಬೇಡಿಕೆ ಇಟ್ಟಿದ್ದನಂತೆ. ಜಿಲ್ಲಾ ಭ್ರಷ್ಟಾಚಾರ ನಿಗ್ರಹದ ದಳದ ಡಿಎಸ್ಪಿ ಉಮಾಶಂಕರ್ ದಾಳಿಯ ನೇತೃತ್ವ ವಹಿಸಿದ್ದರು. ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಮಾಡಲಾಗಿದ್ದು, ಈ ವೇಳೆ ರೈತರ ನೆರವಿಗೆ ಬರದೆ ಲಂಚ ಪಡೆಯುತ್ತಿದ್ದ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.