ತುಮಕೂರು: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಫೆಡರೇಶನ್ ಹಾಗೂ ಎಐಟಿಯುಸಿ ವತಿಯಿಂದ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಟೌನ್ ಹಾಲ್ ವೃತ್ತದಿಂದ ಎಂ.ಜಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಿಸಿಯೂಟ ತಯಾರಕ ಸಿಬ್ಬಂದಿಗಳಿಗೆ ಕನಿಷ್ಠ 18,000 ರೂ. ವೇತನ ನಿಗದಿ ಮಾಡಬೇಕು, ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಮತ್ತಿತರ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ತಕ್ಷಣ ಕೈಬಿಡಬೇಕು, ಕೆಲಸದ ಸೇವಾ ಭದ್ರತೆಯನ್ನು ಒದಗಿಸುವ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಸಲಹೆಗಾರ ಶಿವಣ್ಣ ಮಾತನಾಡಿ, ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಸಿಯೂಟ ತಯಾರಕರಿಗೆ 18,000 ರೂ. ವೇತನ ನೀಡುವ ಮೂಲಕ ಕಾರ್ಮಿಕರೆಂದು ಪರಿಗಣಿಸಬೇಕು, ಜೊತೆಗೆ ಇಎಸ್ಐ, ಪಿಎಫ್ ನೀಡಬೇಕು. ನಿವೃತ್ತಿ ನಂತರ 3,000 ರೂ ಪಿಂಚಣಿ ನೀಡಬೇಕು, ಅಪಘಾತವಾದ ಸಂದರ್ಭದಲ್ಲಿ 5,00,000 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.