ತುಮಕೂರು: ರಫೇಲ್ ಯುದ್ಧ ವಿಮಾನದ ಹಗರಣ ತನಿಖೆಗೆ ಆದೇಶವಾಗಿದ್ದು, ಮೋದಿ ಜೈಲಿಗೆ ಹೋಗಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಪ್ರಧಾನಮಂತ್ರಿ ಮೋದಿ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮೈತ್ರಿ ಪಕ್ಷದ ಅಭ್ಯರ್ಥಿ ದೇವೇಗೌಡ ಅವರು ಇಲ್ಲಿ ಸ್ಪರ್ಧಿಸಿರುವುದು ವಿಶೇಷ. ದಕ್ಷಿಣ ಭಾರತದಿಂದ ಆಯ್ಕೆಯಾಗಿ ಪ್ರಧಾನಮಂತ್ರಿಯಾದ ಮೊದಲ ಏಕೈಕ ವ್ಯಕ್ತಿ ದೇವೇಗೌಡರು. ಹೀಗಾಗಿ ದೇವೇಗೌಡರು ಇಲ್ಲಿಂದ ಸ್ಪರ್ಧಿಸಿರುವುದು ಸಂತಸ ತಂದಿದೆ. ಟಿಕೆಟ್ ವಂಚಿತರಾದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮೈತ್ರಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ, ಪ್ರಚಾರ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
130 ಕೋಟಿ ಜನರ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರವಾಗಲಿದ್ದು, ನಕಲಿ ರಾಷ್ಟ್ರೀಯವಾದ ಮತ್ತು ಬಹುತ್ವವಾದದ ನಡುವೆ ಈ ಬಾರಿ ಚುನಾವಣೆ ನಡೆಯಲಿದೆ. ಮೋದಿಯವರನ್ನು ಬೆಂಬಲಿಸಿದವರು ಮಾತ್ರ ದೇಶ ಭಕ್ತರು. ಟೀಕೆ ಮಾಡಿದರೆ ಅಥವಾ ಅವರ ನೀತಿಗಳಿಗೆ ವಿರೋಧಿಸಿದರೆ ಅವರು ದೇಶ ವಿರೋಧಿಗಳಾಗುತ್ತಾರೆ ಎಂದು ಪ್ರಶ್ನಿಸಿದರು.
ಮೋದಿ ಯುವಜನತೆಗೆ ನೀಡಿದಂತಹ ಉದ್ಯೋಗ ಸೃಷ್ಟಿ ಭರವಸೆ ಎಲ್ಲಿ ಹೋಯಿತು? ಈ ಬಾರಿಯ ಲೋಕಸಭಾ ಚುನಾವಣೆ ನಂತರ ಬಿಎಸ್ಎನ್ಎಲ್ನ ಸಾವಿರಾರು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಬಿಎಸ್ಎನ್ಎಲ್ ಕಂಪನಿಯು ಜಿಯೋ ಆಗಿ ಪರಿವರ್ತನೆಯಾಗುತ್ತಿದೆ. ರೈತರಿಗೆ, ದೇಶಕ್ಕೆ ಏನು ಕೊಟ್ಟಿದ್ದೀರಾ? ರಾಜ್ಯಕ್ಕೆ ನಿಮ್ಮ ಕೊಡುಗೆ ಏನು? ಕೊಟ್ಟಿದ್ದನ್ನು ಮತ್ತೆ ಕಿತ್ತುಕೊಂಡಿದ್ದೀರೇ ಹೊರತು ಅಭಿವೃದ್ಧಿ ಕಾರ್ಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು.