ಬೆಳ್ತಂಗಡಿ: ಯುವಕರ ಗುಂಪೊಂದು ಶ್ರಮದಾನದ ಮೂಲಕ ರುದ್ರಭೂಮಿ ಸ್ವಚ್ಛಗೊಳಿಸಿ, ಉಪಹಾರ ಸೇವಿಸುವುದರೊಂದಿಗೆ ಮೂಢನಂಬಿಕೆಗೆ ಸೆಡ್ಡು ಹೊಡೆದು ಎಲ್ಲರಿಗೂ ಮಾದರಿಯಾಗಿರುವ ಘಟನೆ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ ನಡೆದಿದೆ.
ಹೌದು, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಸ್ಮಶಾನ ಎಂದಾಕ್ಷಣ ಜನರು ಎದ್ದುಬಿದ್ದು ಓಡುತ್ತಾರೆ. ಆದರೆ ಇತಿಹಾಸ ಪ್ರಸಿದ್ಧ ಧರ್ಮಸ್ಥಳದ ಯುವಕರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ, ರುದ್ರಭೂಮಿ ಅಭಿವೃದ್ಧಿ ಸಮಿತಿ ಹಾಗೂ ಊರಿನವರ ಜಂಟಿ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ರುದ್ರಭೂಮಿಯನ್ನು ಸ್ವಚ್ಛಗೊಳಿಸಿದರು.
ರುದ್ರಭೂಮಿಯಲ್ಲಿದ್ದ ಗಿಡಗಳು, ಪೊದೆಗಳನ್ನು ತೆರವುಗೊಳಿಸುವ ಜೊತೆಗೆ ಸ್ಮಶಾನದಲ್ಲೇ ಉಪಹಾರ ಸೇವಿಸುವ ಮೂಲಕ ಮೂಢನಂಬಿಕೆಗೆ ಸೆಡ್ಡು ಹೊಡೆದು ಧರ್ಮಸ್ಥಳ ಪರಿಸರದಲ್ಲಿ ಹೊಸ ವಾತಾವರಣ ನಿರ್ಮಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಜಯಕೀರ್ತಿ ಜೈನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ತಾಲೂಕು ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಜನಾರ್ಧನ, ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಪಂ. ಮಾಜಿ ಸದಸ್ಯ ಸುಧಾಕರ ಗೌಡ, ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರೀತಮ್, ಸಮಾಜ ಸೇವಕ ಪ್ರಭಾಕರ ರಾವ್ ಕನ್ಯಾಡಿ, ರಾಜೇಂದ್ರ ದಾಸ್, ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.