ಬೆಂಗಳೂರು: ಚಿಕ್ಕನಾಯಕನ ಹಳ್ಳಿ ತಾಲೂಕಿನ ಗೋಡೆಕೇರೆ ಮಠದ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಸಿದ್ದರಾಮದೇಶಿ ಕೇಂದ್ರ ಸ್ಚಾಮೀಜಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ಗೋಡೆಕೇರೆ ಶ್ರೀ ಮಠಕ್ಕೆ 9 ನೇ ಗುರುಗಳಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಸಾಕಷ್ಟು ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಶ್ರೀ ಮಠದಿಂದ ಶಾಲಾ ಕಾಲೇಜುಗಳು, ವಸತಿ ನಿಲಯ, ಹಾಗೂ ಅನಾಥಾಶ್ರಮಗಳನ್ನು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗಿದ್ದರು ಎಂದು ಸಿಎಂ ಸ್ಮರಿಸಿದ್ದಾರೆ.
ಶ್ರೀಗಳ ಅಕಾಲಿಕ ಅಗಲಿಕೆ ನೋವು ತಂದಿದೆ ಎಂದಿರುವ ಮುಖ್ಯಮಂತ್ರಿಗಳು, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಅಪಾರ ಭಕ್ತ ವೃಂದಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.