ಹಾಸನ /ಹೊಳೆನರಸೀಪುರ: ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಹೊರ ವಲಯದ ಅರಕಲಗೂಡು ರಸ್ತೆಯಲ್ಲಿ 3.5 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಂಡ ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆಗೆ ಅರಕಲಗೂಡು ಶಾಸಕರಾದ ಎ. ಟಿ.ರಾಮಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹೇಮಾವತಿ ನದಿಯಿಂದ 0.995 ಟಿಎಂಸಿ ನೀರನ್ನು ಉಪಯೋಗಿಸಿಕೊಂಡು ಹೊಳೆನರಸೀಪುರ ತಾಲೂಕು ಮತ್ತು ಅರಕಲಗೂಡು ತಾಲೂಕಿನ ಒಟ್ಟು 8,305 ಎಕರೆ ಅರೆ ಖುಷ್ಕಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು.
ಮಳೆ ಕಡಿಮೆಯಾದ ವರ್ಷ ಸಹ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಅಲ್ಲದೇ ಈ ಯೋಜನೆಯ ವ್ಯಾಪ್ತಿಗೆ ಬರುವ ಒಟ್ಟು 32 ಕೆರೆಗಳನ್ನು ತುಂಬಿಸುವ ಕೆಲಸವಾಗಲಿದ್ದು, ಜನ - ಜಾನುವಾರುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವ ಜೊತೆಗೆ ಅಂತರ್ಜಲ ಹೆಚ್ಚಿಸುವುದು ಯೋಜನೆಯ ಉದ್ದೇಶ ಎಂದರು.
ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಏತ ನೀರಾವರಿ ಯೋಜನೆಗಳನ್ನು ಮಾಡಿದ್ದು, ಇದನ್ನು ಸರಿಯಾಗಿ ನಿರ್ವಹಿಸಿದೆ ಹೋದಲ್ಲಿ ಏತ ನೀರಾವರಿಯ ಉದ್ದೇಶ ಸಾರ್ಥಕವಾಗುವುದಿಲ್ಲ. ಆದ್ದರಿಂದ ಏತ ನೀರಾವರಿಯ ನಿರ್ವಹಣೆ ಮಾಡಲು ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಗಳ ಅಗತ್ಯ ಇರುವುದರಿಂದ ಸರ್ಕಾರ ಕೂಡಲೇ ನಿರ್ವಹಣೆಗೆ ಎಲೆಕ್ಟ್ರೋ ಮೆಕ್ಯಾನಿಕಲ್ ಸಬ್ ಡಿವಿಜನ್ ಅನ್ನು ಪ್ರತಿ ವಲಯಕ್ಕೂ ಮಂಜೂರು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಏತ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.