ಬೆಳಗಾವಿ: ಸಗಣಿ ಕುಳ್ಳಿ(ಬೆರಣಿ)ಗಾಗಿ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತ ಮೃತಪಟ್ಟಿರುವ ಘಟನೆ ಚಲುವೇನಹಟ್ಟಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಲುವೇನಹಟ್ಟಿ ಗ್ರಾಮದ ನೇತಾಜಿ ಗಲ್ಲಿಯ ನಿವಾಸಿ ಟೋಪಣ್ಣ ಪಾಟೀಲ (27) ಮೃತ ವ್ಯಕ್ತಿ. ಯುವಕನ ಕೊಲೆಗೆ ಕಾರಣರಾದ ಮಾರುತಿ ಕಿತವಾಡಕರ (70), ಸಾಗರ ಕಿತವಾಡಕರ (35), ಜ್ಯೋತಿಬಾ ಕಿತವಾಡಕರ (33) ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಮೃತನ ತಂದೆ ಶಿವಾಜಿ ಮತ್ತು ಮಾರುತಿ ಕುಟುಂಬದ ನಡುವೆ ಮೊದಲಿನಿಂದಲೂ ಸಣ್ಣ ಪುಟ್ಟ ಜಗಳದಿಂದಾಗಿ ವೈಮನಸ್ಸು ಇತ್ತು. ಫೆ.1 ರಂದು ಮಾರುತಿ ಕುಟುಂಬದವರು ಮನೆಯ ಹಿತ್ತಲಿನಲ್ಲಿ ಇಡಲಾಗಿದ್ದ ಸಗಣಿ ಕುಳ್ಳುಗಳನ್ನು ಮೃತನ ತಂದೆ ಶಿವಾಜಿ ದನಗಳನ್ನು ಬಿಟ್ಟು ಉದ್ದೇಶಪೂರ್ವಕವಾಗಿ ನಾಶ ಮಾಡಿದ್ದಾನೆ ಎಂದು ಆರೋಪಿಸಿ ಶಿವಾಜಿ ಆತನ ಮಕ್ಕಳಾದ ಟೋಪಣ್ಣನ ಮೇಲೆ ಮಾರುತಿ ಕುಟುಂಬಸ್ಥರು ಹಲ್ಲೆ ನಡೆಸಿದ್ದರು ಎನ್ನಲಾಗ್ತಿದೆ.
ಓದಿ: ಕರ್ನೂಲ್ನಲ್ಲಿ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿ 14 ಜನ ದುರ್ಮರಣ
ಈ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಸದೆ ಯುವಕ ನಿನ್ನೆ ಸಾವನ್ನಪ್ಪಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಯುವಕನ ಸಾವಿನಲ್ಲಿ ಅಂತ್ಯವಾಗಿದ್ದು, ಇತ್ತ ಈತನನ್ನೇ ನಂಬಿ ಬಂದಿದ್ದ ಆತನ ಪತ್ನಿ ಆರೇ ತಿಂಗಳಲ್ಲಿ ವಿಧವೆಯಾಗಿದ್ದು ದುರಂತವೇ ಸರಿ.
ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.