ದಾವಣಗೆರೆ: ದೊರೆಸ್ವಾಮಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಸಮರ್ಥಿಸಿಕೊಂಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಮಾಜಿ ಪ್ರಧಾನಿ ದೇವೇಗೌಡರ ಮನೆಯಿಂದ ಬರೋ ಆದೇಶವನ್ನು ದೊರೆಸ್ವಾಮಿ ಪಾಲಿಸುತ್ತಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿರುವ ರೇಣುಕಾಚಾರ್ಯ, ವೀರ್ ಸಾವರ್ಕರ್, ಭಾರತ ಮಾತೆಗೆ ಅವಮಾನವಾದಾಗ ದೊರೆಸ್ವಾಮಿ ಏಕೆ ಮಾತನಾಡಿಲ್ಲ. ಪಾಕಿಸ್ತಾನದಲ್ಲಿ ಹೋಗಿ ಭಾರತ ಮಾತೆಗೆ ಜೈ ಅಂದರೆ ಕೈಕಾಲು ಕತ್ತರಿಸುತ್ತಾರೆ. ಆದ್ರೆ ಇಲ್ಲಿ ಭಾರತ ಮಾತೆಗೆ ಅವಮಾನ ಮಾಡುವವರ ವಿರುದ್ಧ ನಾವಿದ್ದೇವೆ ಎಂದು ಹೇಳಿದರು.
ದೊರೆಸ್ವಾಮಿ ಹಿರಿಯರು, ಅವರ ಬಗ್ಗೆ ಗೌರವವಿದೆ, ಅವರು ಮಾರ್ಗದರ್ಶನ ಮಾಡಬೇಕು. ಪ್ರಗತಿ ಹೆಸರಿನಲ್ಲಿ ಪಾಕ್ ಜಿಂದಾಬಾದ್ ಎನ್ನೋರ ಪರ ಮಾತನಾಡಿದರೆ ಸಿಟ್ಟು ಬರುತ್ತದೆ. ದೇಶ, ಭಾರತ ಮಾತೆಗೆ ಅವಮಾನವಾದಾಗ ಖಂಡಿಸಬೇಕಿತ್ತು, ಆದರೆ ದೊರೆಸ್ವಾಮಿ ಅವರು ಈ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಮಾರ್ಚ್ 5 ರಿಂದ ಅಧಿವೇಶನಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ವಿಪಕ್ಷಗಳು ಹೇಳಿವೆ. ದೊರೆಸ್ವಾಮಿ ಹಾಗೂ ವೀರ್ ಸಾವರ್ಕರ್ಗೆ ಆದ ಅವಮಾನದ ಬಗ್ಗೆಯೂ ಚರ್ಚೆಯಾಗಲಿ. ಅದನ್ನು ಬಿಟ್ಟು ಅಧಿವೇಶನ ಬಹಿಷ್ಕರಿಸುತ್ತೇವೆ ಎಂದರೆ ಅದು ಆರೂವರೆ ಕೋಟಿ ಜನರಿಗೆ ಮಾಡಿದ ಅಪಮಾನ. ರೈತರ, ಜನರ ಕಷ್ಟಗಳ ಬಗ್ಗೆ ಚರ್ಚೆಯಾಗಬೇಕು, ಅದನ್ನು ಬಿಟ್ಟು ವಿಪಕ್ಷಗಳು ಗದ್ದಲ ಎಬ್ಬಿಸಿದರೆ ಯತ್ನಾಳ್ ಪರವಾಗಿ ನಾವೂ ನಿಲ್ಲುತ್ತೇವೆ ಎಂದು ತಿಳಿಸಿದರು.
ಅಲ್ಲದೇ, ಖಾದರ್ ಮತಾಂಧ, ಮೂರ್ಖ ಎಂದು ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಭಾರತ ಹಾಗೂ ಪಾಕ್ ಬಾಂಧವ್ಯ ವೃದ್ಧಿಗೆ ಹೋಗುತ್ತಾರೆ. ನಿಮ್ಮ ಹಾಗೆ ಬಿರಿಯಾನಿ ತಿನ್ನಲು ಹೋಗಿಲ್ಲ. ನೀವು ಬಿರಿಯಾನಿ ತಿಂತೀರಾ ಎಂದು ಉಳಿದವರು ತಿನ್ನಲು ಆಗುತ್ತಾ ಎಂದ ಅವರು, ನಾವು ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ಮುಸ್ಲಿಂರ ವಿರುದ್ಧ ದ್ವೇಷ ಮಾಡಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ಗೆ ಟಾಂಗ್ ನೀಡಿದರು.