ಕಲಬುರಗಿ: ಜಿಲ್ಲೆಯಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಮನೆ ಮಠ ಕಳೆದುಕೊಂಡು ಜನರು ನಿರ್ಗತಿಗರಾಗುತ್ತಿದ್ದಾರೆ. ಜೊತೆಗೆ ಪರಿಹಾರ ಕೇಂದ್ರಗಳತ್ತ ಮುಖ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಮಲಾಪುರ ತಾಲೂಕಿನ ಸಿರಗಾಪುರ ಗ್ರಾಮದಲ್ಲಿ ಮಳೆ ನೀರು ನುಗ್ಗಿ ಹೊಲ ಗದ್ದೆಗಳು ಹಾಗೂ 42 ಮನೆಗಳು ಹಾನಿಯಾಗಿವೆ. ಬೆಣ್ಣೆತೋರಾ ಜಲಾಶಯ ತುಂಬಿದ್ದು, ಹಿಂಭಾಗ ಹಾಗೂ ಪಕ್ಕದ ನಾಲೆಗಳಿಂದ ನೀರು ಹರಿಯುತ್ತಿದೆ. ಇದರಿಂದಾಗಿ ಸಿರಗಾಪುರ ಗ್ರಾಮಕ್ಕೆ ಜಲ ಕಂಟಕ ಎದುರಾಗಿದೆ. ಮನೆಯಲ್ಲಿನ ದಿನ ಬಳಕೆ ಸಾಮಾನು, ದವಸ ಧಾನ್ಯ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಒಂದು ಹೊತ್ತಿನ ಊಟಕ್ಕೂ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಸದ್ಯಕ್ಕೆ ಬಹುತೇಕ ಗ್ರಾಮಸ್ಥರು ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ. ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಮುಂದೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಗ್ರಾಮಸ್ಥರ ಅಳಲು ಕೇಳಿದ ಜಿಲ್ಲಾಧಿಕಾರಿ ತಕ್ಷಣ ಪರಿಹಾರ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ.
ತಹಶೀಲ್ದಾರ್ ಸಹ ಸದ್ಯಕ್ಕೆ ಬೇಕಾದಂತಹ ಪರಿಹಾರ ಕಾರ್ಯ ಕೈಗೊಳ್ಳುವಂತೆ ಹಾಗೂ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಗ್ರಾಮಸ್ಥರಿಗಾಗಿ ಮಾಡಿದ ಆಹಾರವನ್ನು ಸೇವಿಸಿ ಸ್ಥಳೀಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.