ಬೆಂಗಳೂರು : ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಅವರನ್ನು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಡಿ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎಸ್.ವಿ. ರಾಮಚಂದ್ರ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ ಹೆಚ್.ಪಿ.ರಾಜೇಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಪೀಠ ಸೋಮವಾರ ಪ್ರಕಟಿಸಿದೆ. ಇದರಿಂದಾಗಿ ಶಾಸಕ ರಾಮಚಂದ್ರ ಅವರಿಗೆ ರಿಲೀಫ್ ಸಿಕ್ಕಿದಂತಾಗಿದೆ.
ಚುನಾವಣಾ ತಕರಾರು ಅರ್ಜಿಯಲ್ಲಿ, ರಾಮಚಂದ್ರ ಅವರ ತಂದೆ ದಿ. ವೀರಪ್ಪ ಮರಾಠ ಸಮುದಾಯಕ್ಕೆ ಸೇರಿದವರು. ವೀರಪ್ಪನವರ ಎರಡನೇ ಪತ್ನಿ ಕೆಂಚಮ್ಮ ಪರಿಶಿಷ್ಟ ಪಂಗಡಕ್ಕೆ ಸೇರುವ ವಾಲ್ಮೀಕಿ ಸಮುದಾಯದವರು. ಹೀಗಾಗಿ ತಾವು ವಾಲ್ಮೀಕಿ ಜನಾಂಗಕ್ಕೆ ಸೇರಿದವರು ಎಂದು ಹೇಳಿಕೊಳ್ಳುವ ರಾಮಚಂದ್ರ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಟಿಗೆ ಮೀಲಾಗಿದ್ದ ಜಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ತಾವು ಪರಿಶಿಷ್ಟ ವರ್ಗಕ್ಕೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಪರಾಜಿತ ಅಭ್ಯರ್ಥಿ ರಾಜೇಶ್ ಕೋರಿದ್ದರು.
ಅರ್ಜಿ ವಿಚಾರಣೆ ವೇಳೆ ಶಾಸಕ ರಾಮಚಂದ್ರ ಪರ ವಾದಿಸಿದ್ದ ವಕೀಲರು, ದಾವಣಗೆರೆ ಜಿಲ್ಲಾ ಜಾತಿ ಪ್ರಮಾಣಪತ್ರದ ಸಿಂಧುತ್ವ ಪರಿಶೀಲನಾ ಸಮಿತಿಯು, ರಾಮಚಂದ್ರ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರಮಾಣ ಪತ್ರ ನೀಡಿದೆ.
ಹೀಗಾಗಿ ಪ್ರಕರಣದಲ್ಲಿ ಹೆಚ್ಚಿನ ವಿವಾದಾಂಶ ಇಲ್ಲದಿರುವುದರಿಂದ ಪರಾಜಿತ ಅಭ್ಯರ್ಥಿ ಸಲ್ಲಿಸಿರುವ ತಕರಾರು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ್ದರು. ಜಿಲ್ಲಾ ಜಾತಿ ಪ್ರಮಾಣಪತ್ರ ಸಿಂಧುತ್ವ ಸಮಿತಿಯ ಪ್ರಮಾಣ ಪತ್ರ ಪರಿಗಣಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.