ಮೈಸೂರು: ರೈತರ ಆದಾಯ ದ್ವಿಗುಣಗೊಳಿಸುವ ಜೊತೆಗೆ ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅದರೆ ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಹಿತಕಾಯುವ ಕೆಲಸ ಮಾಡುತ್ತಿದ್ದು, ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ಭಾಗದಲ್ಲಾದರೂ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಜೊತೆಗೆ ದಲ್ಲಾಳಿಗಳ ಹಾವಳಿ ತಪ್ಪುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಯಾವುದೇ ವಿಷಯದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಸರಕು ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ಗೋದಾಮಿನ ವ್ಯವಸ್ಥೆ ಸೇರಿದಂತೆ ರೈತರಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಅಧಿಕಾರ ರಾಜ್ಯದ ಸಚಿವರಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವಿಚಾರವಾಗಿ ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು, ಗೊಂದಲ ಸೃಷ್ಟಿಸಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೀದಿ ನಾಟಕ ಆಡಲು ಕಾಂಗ್ರೆಸ್ ಬಿಟ್ಟರೆ ಬೇರೆ ಪಕ್ಷವೇ ಇಲ್ಲದಂತಾಗಿದ್ದು, ಇಂತಹ ಗೊಂದಲದ ಸುದ್ದಿಗಳನ್ನು ಹರಡಬೇಡಿ. ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಈ ವಿಚಾರವಾಗಿ ಯಾವುದೇ ಸಲಹೆಗಳನ್ನು ನೀಡಿದರೂ ಸ್ವೀಕರಿಸಲು ನಾವು ಸಿದ್ಧವಿದ್ದೇವೆ ಎಂದು ಸಚಿವ ಸದಾನಂದ ಗೌಡ ಹೇಳಿದ್ರು.
ಕೇಂದ್ರ ಸರ್ಕಾರ ಈ ಕಾಯ್ದೆ ಜಾರಿಗೊಳಿಸುವ ಮುನ್ನ 3 ವರ್ಷ ತಯಾರಿ ಮಾಡಿಕೊಂಡಿದೆ. ಸಾಕಷ್ಟು ರೈತರ ಸಲಹೆಗಳನ್ನು ಸಂಗ್ರಹಿಸಲಾಗಿದ್ದು, ಕಾಂಗ್ರೆಸ್ ನವರು ರೈತರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲದಿದ್ದರೆ ಮಾಸ್ಕ್ ಧರಿಸಿ ಬಾಯಿ ಮುಚ್ಚಿಕೊಂಡು, ರೈತರಿಂದ ಅಂತರ ಕಾಯ್ದುಕೊಳ್ಳಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದರು.