ಬೆಂಗಳೂರು: ಭಾವನಾತ್ಮಕವಾಗಿ ಜನರನ್ನು ದೇಶದಲ್ಲಿ ಮರುಳು ಮಾಡಲು ಮುಂದಾದ ಕೇಂದ್ರ ಸರ್ಕಾರ ಅದರ ಪರಿಣಾಮವನ್ನು ಎದುರಿಸುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸುವ ಜೊತೆಗೆ ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಗಾರ ಎಂದು ಆರೋಪಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಿನ್ನೆ ಟ್ವೀಟ್ ಮಾಡಿ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ನಿಯಂತ್ರಣದಲ್ಲಿರುವ ಮಹಾಮಾರಿ ಕೊರೊನಾ, ಭಾರತದಲ್ಲಿ ಮಾತ್ರ ಹೆಚ್ಚುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಕೆಲವು ದಿನಗಳಲ್ಲಿ ವಿಶ್ವದಲ್ಲೇ 1ನೇ ಸ್ಥಾನಕ್ಕೆ ಭಾರತ ಏರುವುದರಲ್ಲಿ ಸಂದೇಹವಿಲ್ಲ. ಜನಸಂಖ್ಯೆ ಹೆಚ್ಚಿರುವುದರಿಂದ ಇದು ಆಶ್ಚರ್ಯಕರ ಸಂಗತಿ ಅಲ್ಲ. ಆದ್ರೆ ನೆರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ವೈಫಲ್ಯ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಇಂದು ಅದರ ಮುಂದುವರೆದ ಭಾಗವನ್ನು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ ಪರಿಣಾಮವಿದು. ಬಿಜೆಪಿ ಘೋಷಿತ 'ವಿಶ್ವಗುರು'ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ?ಎಂದು ಪ್ರಶ್ನಿಸಿದ್ದಾರೆ.
ದೇಶ ಮುನ್ನಡೆಸುವ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ವಿಶೇಷ ಕಾಳಜಿ ತೋರಿಸುತ್ತಿಲ್ಲ. ಕೇವಲ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಪ್ರಯತ್ನ ನಡೆಸಿದೆ ಎಂದಿದ್ದಾರೆ.