ಬೆಂಗಳೂರು: ರಾಜ್ಯದಲ್ಲಿನ ಕೋವಿಡ್-19 ಸ್ಥಿತಿಗತಿಯ ಅವಲೋಕನಕ್ಕಾಗಿ ನಾಳೆ ಎಲ್ಲಾ ಜಿಲ್ಲಾಡಳಿತದೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ವಿಡಿಯೋ ಸಂವಾದ ನಡೆಸಲಿದ್ದಾರೆ.
ಹೋಂ ಕ್ವಾರಂಟೈನ್ ಹಿನ್ನಲೆಯಲ್ಲಿ ಸರ್ಕಾರಿ ನಿವಾಸ ಕಾವೇರಿಯಿಂದಲೇ ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್,ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೂಡ ವೀಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಆಯಾ ಜಿಲ್ಲೆಗಳಲ್ಲಿ ಕೋವಿಡ್-19 ಪರಿಸ್ಥಿತಿ ಯಾವ ರೀತಿ ಇದೆ, ಪರಿಸ್ಥಿತಿ ನಿಭಾಯಿಸಲು ಎದುರಾಗುತ್ತಿರುವ ತೊಂದರೆಗಳು, ಸೌಲಭ್ಯಗಳ ಕೊರತೆ ಸೇರಿದಂತೆ ಸಿಎಂ ವಿಸ್ತಾರವಾದ ಚರ್ಚೆ ನಡೆಸಲಿದ್ದಾರೆ. ಮಾರ್ಗಸೂಚಿ ಪಾಲನೆ, ಖಾಸಗಿ ಆಸ್ಪತ್ರೆಗಳ ಸಹಕಾರ ಸೇರಿದಂತೆ ಎಲ್ಲಾ ಆಯಾಮದಲ್ಲಿಯೂ ಕೂಲಂಕಷವಾಗಿ ಚರ್ಚೆ ನಡೆಸಲಿದ್ದಾರೆ.
ಐದಾರು ಜಿಲ್ಲೆಗಳಲ್ಲಿ ಪ್ರತಿ ದಿನ ಶತಕದ ಸಮೀಪ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು ಅಲ್ಲಿ ಏನು ಕ್ರಮ ಅಗತ್ಯವಿದೆ, ಬೆಂಗಳೂರಿನ ಜೊತೆ ಆ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಜಾರಿ ಮಾಡಬೇಕಾ? ಎನ್ನುವ ಕುರಿತು ಜಿಲ್ಲಾಡಳಿತದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22 ರ ಮುಂಜಾನೆ 5 ಗಂಟೆ ವರೆಗೆ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೆ ಆದೇಶಿಸಿದ್ದು, ಮತ್ತೆ ಯಾವ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾಗಲಿದೆ ಎನ್ನುವುದು ಜಿಲ್ಲಾಡಳಿತ ವ್ಯಕ್ತಪಡಿಸುವ ಅಭಿಪ್ರಾಯದ ಮೇಲೆ ನಿಂತಿದೆ.