ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಅಧಿಕೃತವಾಗಿ ಮ್ಯಾಜಿಸ್ಟ್ರೇಟ್ ವಿಚಾರಣೆ ಆರಂಭವಾಗಲಿದೆ.
ಇಂದಿನಿಂದ ಮ್ಯಾಜಿಸ್ಟ್ರೇಟ್ ವಿಚಾರಣೆಯ ಮೊದಲ ಹಂತ ಆರಂಭವಾಗಲಿದ್ದು, ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ಗೆ ಸಾರ್ವಜನಿಕ ಅಹವಾಲು ಸಲ್ಲಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವಕಾಶ ನೀಡಲಾಗಿದೆ. ಸಾರ್ವನಿಕರ ಅಹವಾಲು ಸ್ವೀಕರಿಸಿ, ಆರೋಪ-ಪ್ರತ್ಯಾರೋಪಗಳ ಪರಾಮರ್ಶೆ ನಡೆಯಲಿದೆ.
ಅರ್ಜಿದಾರರ ಅರ್ಜಿಯಲ್ಲಿರುವ ಅಂಶಗಳ ಸತ್ಯಾಸತ್ಯತೆ ಪರಿಶೀಲನೆ ಮಾಡಿ, ವಿಚಾರಣೆ ನಡೆಸಿ ಸೂಕ್ತ ದಾಖಲೆಗಳು, ಸಾಕ್ಷ್ಯಧಾರಗಳ ಪರಿಶೀಲನೆ
ಬಳಿಕ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿ ಮಾಡಲಿದ್ದಾರೆ.
ಈ ತನಿಖೆ ಬೆಂಗಳೂರು ನಗರ ಡಿಸಿ ಜಿ.ಎನ್.ಶಿವಮೂರ್ತಿ ನೇತೃತ್ವದಲ್ಲಿ ನಡೆಯಲಿದೆ. ಇವರ ಜೊತೆ ಜಿಲ್ಲಾಧಿಕಾರಿಗಳು, ಕಾನೂನು ಸಲಹೆಗಾರರು, ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಎಸ್.ರೇವಣಕರ್, ತಹಶೀಲ್ದಾರ್ ಹಾಗೂ ಓರ್ವ ಎಸಿ ಸೇರಿದಂತೆ ಇತರರು ಮ್ಯಾಜಿಸ್ಟ್ರೇಟ್ ಸಮಿತಿಯಲ್ಲಿ ಇರಲಿದ್ದಾರೆ.
ಪ್ರಕರಣದ ಹಿನ್ನೆಲೆ:
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 11ರ ರಾತ್ರಿ ಗಲಭೆ ನಡೆದಿದ್ದು, ಕಿಡಿಗೇಡಿಗಳು ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಗೋಲಿಬಾರ್ ಮಾಡಿದ್ದರು.
ಗೋಲಿಬಾರ್ ವೇಳೆ ಗುಂಡು ತಗುಲಿ ನಾಲ್ವರು ಮೃತರಾಗಿದ್ದರು. ಈ ಕುರಿತು ಇದೀಗ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಸರ್ಕಾರ ಆದೇಶಿಸಿದ್ದು, ಸದ್ಯ ಮ್ಯಾಜಿಸ್ಟ್ರೇಟ್ಗೆ ಗೋಲಿಬಾರ್ನಲ್ಲಿ ಮೃತಪಟ್ಟವರ ಪೋಷಕರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಲಿರುವ ಮ್ಯಾಜಿಸ್ಟ್ರೇಟ್, ಮೂರು ತಿಂಗಳ ಅವಧಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.