ಬಾಗೇಪಲ್ಲಿ : ತಾಲೂಕಿನ ಹಲವೆಡೆ ಗೋಡೆಗಳ ಮೇಲೆ ಬರೆದಿರುವ ಸ್ವಚ್ಛತಾ ಜಾಗೃತಿ ಬಿತ್ತಿ ಚಿತ್ರಗಳು, ಮುಂಜಾಗ್ರತಾ ಕ್ರಮಗಳು ಕೇವಲ ಜಾಹೀರಾತಿಗೆ ಸೀಮಿತವಾಗಿವೆ.
ಆ ಜಾಗೃತಿ ಕ್ರಮಗಳನ್ನು ಪಾಲಿಸುವುದಾಗಲಿ, ಜಾರಿ ಮಾಡುವ ಗೋಜಿಗಾಗಲಿ ನಾಗರಿಕರು ಮುಂದೆ ಬರಲ್ಲ, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ತಾಜಾ ಉದಾಹರಣೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಗೋಡೆಯ ಮೇಲೆ ಬರವಣಿಗೆಗಳ ಮೂಲಕ ಜಾಗೃತಿ ಸಂದೇಶ ಸಾರಲಾಗಿದೆ.
ಆದರೆ, ಆ ಗೋಡೆ ಬರವಣಿಗೆಯ ಬುಡದಲ್ಲೆ ಪ್ಲಾಸ್ಟಿಕ್ ಪೇಪರ್ ರಾಶಿ ಬಿದ್ದಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲ್ಲ, ನೀರಿನ ಶುದ್ಧೀಕರಣ ಘಟಕ ಕೆಟ್ಟು ಸುಮಾರು ತಿಂಗಳುಗಳೇ ಕಳೆದು ಹೋಗಿವೆ. ದಲ್ಲಾಳಿಗಳ ಹಾವಳಿ ತಡೆಯಬೇಕಾಗಿದೆ ಎಂದು ಯುವ ರೈತ ಶಶಿಕುಮಾರ್ ತಿಳಿಸಿದರು.
ಅಧಿಕಾರಿಗಳು, ಸಮಸ್ಯೆಗಳ ಕುರಿತು ದೂರುಗಳು ಬರುವುದನ್ನು ಕಾಯದೆ, ಪರಿಹಾರಕ್ಕೆ ಮುಂದಾಗಬೇಕು ಎಂದು ಸ್ಥಳೀಯ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.