ಶಿವಮೊಗ್ಗ: ಪೋಕ್ಸೋ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರುವ ಮುನ್ನವೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮದನ ಕುಮಾರ್ (25) ಎಂಬಾತ ನಿನ್ನೆ ತನ್ನ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ.
ಮದನ ವಿರುದ್ದ ಅದೇ ಗ್ರಾಮದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಮೇಲೆ ಪೋಕ್ಸೋ ಪ್ರಕರಣ ಕಳೆದ ಐದಾರು ವರ್ಷದ ಹಿಂದೆ ದಾಖಲಾಗಿತ್ತು. ನಂತರ ಮದನ ಕುಮಾರ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ. ಪ್ರಕರಣದಲ್ಲಿ ಮದನ ಕುಮಾರ್ ಹಾಗೂ ಬಾಲಕಿ ಇಬ್ಬರು ಪ್ರೀತಿಸುತ್ತಿದ್ದರು, ಆದರೆ ಬಾಲಕಿಯ ಪೋಷಕರ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಮದನ ಕುಮಾರ್ ಪರ ಇಂದು ತೀರ್ಪು: ಮದನ ಕುಮಾರ್ ಪೋಕ್ಸೋ ಪ್ರಕರಣದಲ್ಲಿ ನಿರ್ದೋಷಿ ಎಂದು ಶುಕ್ರವಾರ ಜಿಲ್ಲಾ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಗುರುವಾರ ಮದನ್ ನೇಣಿಗೆ ಶರಣಾಗಿದ್ದಾನೆ.
ಡೆತ್ ನೋಟ್ ಲಭ್ಯ: ಮದನ್ ತಾನು ನೇಣಿಗೆ ಶರಣಾಗುವ ಮುನ್ನಾ ಒಂದು ನೋಟ್ ಬರೆದಿಟ್ಟಿದ್ದು, ಇದರಲ್ಲಿ ತನ್ನೂರಿನ ಬಾಲಕಿಯ ಸಂಬಂಧಿಕರು ತಮಗೆ 25 ಲಕ್ಷ ರೂ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ಸಹ ತನಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಹಣ ನೀಡದೇ ಹೋದರೆ, ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ.. ಕಾರಣ?