ಶಿವಮೊಗ್ಗ: ನಗರದ ಹೊರ ವಲಯದಲ್ಲಿ ಸೆಪ್ಟೆಂಬರ್-24 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ನಗರದ ಹೊರ ವಲಯದ ಕಲ್ಲೂರು - ಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದ ಮುಂಭಾಗದ ಬಡಾವಣೆಯಲ್ಲಿ ಸೈಯ್ಯದ್ ಸಾಧಿಕ್ ಎಂಬುವರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಬೈಪಾಸ್ ರಸ್ತೆಯ ಗೌಸಿಯ ಹೋಟೆಲ್ ಮಾಲೀಕರಾದ ಮನ್ಸೂರ್, ಶಾಹಿದ್ ಹಾಗೂ ಫಾರೂಕ್ ಎಂಬುವರನ್ನು ಬಂಧಿಸಲಾಗಿದೆ.
ಕೊಲೆಯಾದ ಸೈಯ್ಯದ್ ಸಾಧಿಕ್ಗೆ ಮನ್ಸೂರ್ 15 ಲಕ್ಷ ರೂ. ಹಣ ನೀಡಬೇಕಿತ್ತು. ಈ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ. ಸೈಯ್ಯದ್ ಸಾಧಿಕ್ ಶಿವಮೊಗ್ಗದ ರವಿ ಎಂಬಾತನ ಬಳಿ ಹಣ ತಂದು ಮನ್ಸೂರ್ಗೆ ನೀಡಿದ್ದ. ಆದರೆ, ಮನ್ಸೂರ್ ಸರಿಯಾಗಿ ಬಡ್ಡಿ ನೀಡುತ್ತಿರಲಿಲ್ಲ. ಹಣ ಕೇಳಿದರೂ ವಾಪಸ್ ನೀಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೈಯ್ಯದ್ ಹಾಗೂ ಮನ್ಸೂರ್ ನಡುವೆ ಸಾಕಷ್ಟು ಗಲಾಟೆ, ರಾಜಿ- ಪಂಚಾಯಿತಿಗಳು ನಡೆದಿದ್ದವು.
ಹಣ ನೀಡದೆ ಹೋದರೆ ಮನೆ ಹಾಗೂ ಹೋಟೆಲ್ ಬಳಿ ಬಂದು ಗಲಾಟೆ ಮಾಡುತ್ತೇನೆ ಎಂದು ಸೈಯ್ಯದ್ ಸಾಧಿಕ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ್ದ ಮನ್ಸೂರ್, ಸಾಧಿಕ್ ಕೊಲೆ ಮಾಡಲು ಫಾರೂಕ್ ಎಂಬ ರೌಡಿ ಶೀಟರ್ಗೆ 2 ಲಕ್ಷಕ್ಕೆ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ.
ಹಣ ನೀಡುವುದಾಗಿ ಕರೆಯಿಸಿ ಕೊಲೆ:
ಮನ್ಸೂರ್, ಸೈಯ್ಯದ್ ಸಾಧಿಕ್ಗೆ ಹಣ ನೀಡುತ್ತೇನೆ ಎಂದು ಫೋನ್ ಮಾಡಿ ಕರೆಯಿಸಿದ್ದಾನೆ. ಅಲ್ಲಿ ಮತ್ತೆ ಜಗಳ ನಡೆದಿದ್ದು, ಸೈಯ್ಯದ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಮನ್ಸೂರ್ ಜೊತೆ ಫಾರೂಕ್ ಹಾಗೂ ಶಾಹಿದ್ ಸಹ ಇದ್ದರು.