ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಸಂಬಂಧ ಇಂದು ಬಿಜೆಪಿಯ ಸತ್ಯ ಶೋಧನ ಸಮಿತಿ ತಂಡ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಾಜಿ ಡಿಸಿಎಂ ಡಾ.ಸಿ.ಅಶ್ವತ್ಥ ನಾರಾಯಣ್, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ತಂಡವು ಇಂದು ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಲಿದೆ.
ಬಿಜೆಪಿಯ ಸತ್ಯ ಶೋಧನಾ ತಂಡವು ಮೊದಲು ಘಟನೆಯಲ್ಲಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಲಿದ್ದಾರೆ. ನಂತರ ಕಲ್ಲು ತೂರಾಟವಾಗಿದ್ದ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಿಜೆಪಿ ಕಚೇರಿಯಲ್ಲಿ ತಮ್ಮ ಭೇಟಿಯ ಕುರಿತು ಮಾಧ್ಯಮಗೋಷ್ಡಿ ನಡೆಸಲಿದ್ದಾರೆ.
ಸೆಪ್ಟಂಬರ್ 1 ರಂದು ರಾಗಿಗುಡ್ಡದಲ್ಲಿ ನಡೆಯುತ್ತಿದ್ದ ಮೆರವಣಿಗೆಯ ವೇಳೆ ಗಲಾಟೆಯಾಗಿ ಐದಾರು ಮನೆಗಳ ಮೇಲೆ ದಾಳಿಯಾಗಿತ್ತು. ಈ ವೇಳೆ ಮನೆಗಳ ಮೇಲೆ ಕಲ್ಲು ತೂರಾಟನಡೆಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು 24 ಎಫ್ ಐ ಆರ್ ದಾಖಲಿಸಿ 64 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಎರಡು ದಿನಗಳ ಹಿಂದೆ ರಾಗಿಗುಡ್ಡಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದರು.
ಆಂತರಿಕ ಭದ್ರತಾ ವಿಭಾಗದಿಂದ ತನಿಖೆ: ರಾಗಿಗುಡ್ಡ ಪ್ರಕರಣ ಸಂಬಂಧ ಆಂತರಿಕ ಭದ್ರತಾ ವಿಭಾಗದ ದಾವಣಗೆರೆಯ ತಂಡ ತನಿಖೆಗೆ ಇಳಿದಿದೆ. ಘಟನೆ ನಡೆದ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ದಾವಣಗೆರೆ ಡಿವೈಎಸ್ಪಿ ನಾಗೇಶ್ ಐತಾಳ್ ಮತ್ತು ತಂಡ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದರು.
ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ಈ ಮೊದಲು ಆಗ್ರಹಿಸಿದ್ದರು. ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ಳುವಂತೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರ ವೈಫಲ್ಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದರು.
ಈ ಪ್ರಕರಣದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಕಾನೂನು ವಿರೋಧಿ ಶಕ್ತಿಗಳಿಗೆ ಅವಕಾಶ ನೀಡಲ್ಲ. ದೇವರು- ಧರ್ಮದ ಹೆಸರಲ್ಲಿ ಸಾಮರಸ್ಯ ಕದಡುವವರನ್ನ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಡಿಜಿ- ಐಜಿ ಅಲೋಕ್ ಮೋಹನ್ ಶಿವಮೊಗ್ಗದ ರಾಗಿ ಗುಡ್ಡಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದರು. ಕಲ್ಲು ತೂರಾಟ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರನ್ನು ಈಗಾಗಲೇ ಬಂಧಿಸಲಾಗಿದೆ. ಘಟನೆಯ ಮೂಲ ಯಾವುದು ಎನ್ನುವುದರ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು.
ಇದನ್ನೂ ಓದಿ: ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಿ: ಬಿಜೆಪಿ ಒತ್ತಾಯ