ಶಿವಮೊಗ್ಗ: ಮಲೆನಾಡಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದಿನಿಂದ ಹೃದ್ರೋಗ ಶಸ್ತ್ರ ಚಿಕಿತ್ಸೆ ವಿಭಾಗ ಪ್ರಾರಂಭವಾಗಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಇಂದಿನಿಂದ ವಿಭಾಗ ಕಾರ್ಯಾರಂಭ ಮಾಡಿದೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೆಶಕ ಡಾ.ಮಂಜುನಾಥ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ರವೀಂದ್ರನಾಥ್ ಅವರು ಹೃದ್ರೋಗಿಗಳಿಗೆ ಆ್ಯಂಜಿಯೋಗ್ರಾಂ, ಆ್ಯಂಜಿಯೋಪ್ಲಾಸ್ಟಿ ಹಾಗೂ ಸ್ಟಂಟ್ ಅಳವಡಿಸುವ ಮೂಲಕ ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ್ದಾರೆ.
ಇಂದು ಐದು ಮಂದಿಗೆ ಅತ್ಯಾಧುನಿಕ ಕ್ಯಾಥ್ ಲ್ಯಾಬ್ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ 50 ಬೆಡ್ಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇಲ್ಲಿ ಶಿವಮೊಗ್ಗ ಮಾತ್ರವಲ್ಲದೆ ಹೊರ ಜಿಲ್ಲೆಯ ರೋಗಿಗಳ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ 25 ರಿಂದ 35 ವರ್ಷದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಇಲ್ಲಿನ ಕ್ಯಾಥ್ ಲ್ಯಾಬ್ನಲ್ಲಿ ಹೃದಯ ಸಂಬಂಧಿ ಮಾಸ್ಟರ್ ಆರೋಗ್ಯ ತಪಾಸಣೆ ಸೌಲಭ್ಯವನ್ನು ಒದಗಿಸಲಾಗಿದೆ. ಈ ಮೂಲಕ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಪರ ರಾಜ್ಯ ಅಥವಾ ಬೆಂಗಳೂರಿಗೆ ತೆರಳಬೇಕಾದ ಅವಲಂಬನೆ ಕಡಿಮೆಯಾಗಲಿದೆ.
ಮೆಗ್ಗಾನ್ ಅಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕ್ಯಾಥ್ ಲ್ಯಾಬ್ ಘಟಕ ಪ್ರಾರಂಭಿಸಲು ಉಪಕರಣಗಳು ಹಾಗೂ ಪೀಠೋಪಕರಣ ಖರೀದಿಗಾಗಿ 9.50 ಕೋಟಿ ಬಿಡುಗಡೆಯಾಗಿದೆ
ಈಗ ಸಂಸ್ಥೆಯ ಕಾರ್ಡಿಯಾಲಾಜಿ ವಿಭಾಗದಲ್ಲಿ ಕ್ಯಾಥ್ ಲ್ಯಾಬ್ ಒಳಗೊಂಡಂತೆ ಇಸಿಜಿ-08, ಎಕೋ ಕಾರ್ಡಿಯೋ ಗ್ರಾಮ್-03, ಟ್ರೆಡ್ ಮಿಲ್ ಟೆಸ್ಟ್-02 ಹಾಗೂ ಹೋಲ್ಟರ್ ಮಾನಿಟರ್-02 ಸೌಲಭ್ಯ ಒದಗಿಸಲಾಗಿದೆ. ಇಲ್ಲಿ 50 ಬೆಡ್ ವ್ಯವಸ್ಥೆಯಲ್ಲಿ 12 ಹಾಸಿಗೆ ಪುರುಷ, 12 ಹಾಸಿಗೆ ಮಹಿಳೆಯರಿಗೆ ಮೀಸಲಿಡಲಾಗಿದೆ. 8 ಹಾಸಿಗೆಗಳು ICCU ಹಾಗೂ 3 ಪೊಸ್ಟ್ ಕ್ಯಾಥ್ ICU ಇರುತ್ತದೆ. ಸದ್ಯ ಈ ಅಸ್ಪತ್ರೆಯಲ್ಲಿ ಡಾ.ವಿರುಪಾಕ್ಷಪ್ಪ, ಡಾ.ಪರಮೇಶ್ವರಪ್ಪ ಹಾಗೂ ಡಾ.ಮಹೇಶ್ ಮೂರ್ತಿ ಸೇವೆಯಲ್ಲಿ ಲಭ್ಯವಿರುತ್ತಾರೆ.
ಓದಿ: ಶಿವಮೊಗ್ಗದ ಇಬ್ಬರು ಸಚಿವರಿಗೆ ಸಿಕ್ತು ಪ್ರಭಾವಿ ಖಾತೆ : ಜಿಲ್ಲೆಯ ಜನರಿಂದ ಅಭಿವೃದ್ಧಿ ನಿರೀಕ್ಷೆ