ಶಿವಮೊಗ್ಗ: ಯುಗಾದಿ ಹಿನ್ನೆಲೆ, ಮಾರುಕಟ್ಟೆಯಲ್ಲಿ ಪ್ರತಿ ಬಾರಿ ಇರುತ್ತಿದ್ದ ಜನಜಂಗುಳಿ ಈ ವರ್ಷ ಕಂಡುಬರುತ್ತಿಲ್ಲ. ಕೊರೊನಾ ಹಿನ್ನೆಲೆ ಸರಳವಾಗಿ ಯುಗಾದಿ ಹಬ್ಬವನ್ನು ಆಚರಿಸಲು ಜಿಲ್ಲೆಯ ಜನ ನಿರ್ಧರಿಸಿದಂತೆ ಕಾಣುತ್ತಿದೆ.
ಪ್ರತಿ ವರ್ಷ ಯುಗಾದಿ ಹಬ್ಬ ಬಂತೆಂದರೆ ಸಾಕು, ಶಿವಮೊಗ್ಗದಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಎಗ್ಗಿಲ್ಲದಂತೆ ನಡೆಯುತ್ತಿತ್ತು. ಆದರೆ ಕಳೆದ ವರ್ಷದಿಂದ ಯುಗಾದಿ ಹಬ್ಬದ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿದೆ. ಆದರೆ ಈ ಬಾರಿ ಲಾಕ್ಡೌನ್ ಇಲ್ಲ. ಆದರೂ ಶಿವಮೊಗ್ಗದಲ್ಲಿ ಯುಗಾದಿ ರಂಗು ಅಷ್ಟಾಗಿ ಕಾಣುತ್ತಿಲ್ಲ.
ಇದನ್ನೂ ಓದಿ: ಮನೆಯಲ್ಲೇ ಇದ್ದು, ಸರಳವಾಗಿ ಯುಗಾದಿ ಹಬ್ಬ ಆಚರಿಸಿ.. ಇದು 'ಈಟಿವಿ ಭಾರತ' ಕಾಳಜಿ
ಇಲ್ಲಿನ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿ ಬಜಾರ್ ಹಾಗೂ ಮಹಾನಗರ ಪಾಲಿಕೆ ಪಕ್ಕದ ರಸ್ತೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಬ್ಬದ ಕಾರಣದಿಂದಾಗಿ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳು ನಿರಾಸೆ ಅನುಭವಿಸಿದರು. ಶೇ. 80ರಷ್ಟು ಜನರು ಮಾಸ್ಕ್ ಧರಿಸಿ ಮಾರುಕಟ್ಟೆಗೆ ಬಂದಿದ್ದು, ಕೊರೊನಾ ಬಗ್ಗೆ ಜಾಗೃತರಾಗಿದ್ದಾರೆ ಎಂಬುದನ್ನು ತೋರಿಸುತ್ತಿತ್ತು.