ಶಿವಮೊಗ್ಗ: ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸದೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಒತ್ತಾಯಿಸಿದರು
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಗಂದೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ ಬೇಸರ ತಂದಿದೆ. ಈಡಿಗ ಸಮುದಾಯವು ಹಿಂದುಳಿದ ಸಮುದಾಯವಾಗಿದೆ. ತಲೆತಲಾಂತರಗಳಿಂದ ದೇವಿಯನ್ನು ಪೂಜಿಸುತ್ತಾ ಬಂದಿದೆ. ಧರ್ಮಸ್ಥಳದಲ್ಲಿ ಹೇಗೆ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರವನ್ನು ನಿಭಾಯಿಸುತ್ತಿದ್ದಾರೆಯೋ, ಹಾಗೆಯೇ ಸಿಗಂದೂರಿನ ರಾಮಪ್ಪನವರು ಶ್ರೀಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ದೇವಸ್ಥಾನದ ಅರ್ಚಕರಾದ ಶೇಷಗಿರಿ ಭಟ್ ಅವರು ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ನೀಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಹಾಗೂ ದೇವಸ್ಥಾನದ ಪೀಠೋಪಕರಣಗಳನ್ನು ಹಾಳು ಮಾಡಿ ಹಲ್ಲೆ ನಡೆಸಿದ ಅರ್ಚಕ ಶೇಷಗಿರಿ ಭಟ್ ಅವರನ್ನು ವಜಾಗೊಳಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯವರು ಶ್ರೀ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಕೂಡಲೇ ಈ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಈಡಿಗ ಸಮುದಾಯದ ಏಳು ಜನ ಶಾಸಕರು ಇದ್ದರೂ ಸಹ ಈ ಸಮಸ್ಯೆ ಕುರಿತಾಗಿ ಯಾರು ಮಾತನಾಡದಿರುವುದು ವಿಪರ್ಯಾಸ ಎಂದರು. ಇನ್ನೂ ಇದೇ ತಿಂಗಳು 29 ರಂದು ''ಶೇಷಗಿರಿ ಭಟ್ಟ ಹಠಾವೋ ಸಿಗಂದೂರು ಬಚಾವ್'' ಎಂಬ ಘೋಷವಾಕ್ಯದೊಂದಿಗೆ ಸಿಗಂದೂರು ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.