ಶಿವಮೊಗ್ಗ: ನಗರಾದ್ಯಂತ ಸ್ಮಾರ್ಟ್ಸಿಟಿ ಯೋಜನೆಯಡಿ ಹತ್ತು ಹಲವು ಕಾಮಗಾರಿಗಳು ನಡೆಯುತ್ತಿವೆ. ಕೆಲ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದರೆ ಇನ್ನು ಕೆಲ ಕಾಮಗಾರಿಗಳು ಇದೀಗ ಆರಂಭಗೊಂಡಿವೆ.
ಈ ಮಧ್ಯೆ ಶಿವಮೊಗ್ಗ ಹೃದಯಭಾಗದಲ್ಲಿರುವ ಗಾಂಧಿ ಪಾರ್ಕ್ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಜನರನ್ನು ಗಾಂಧಿ ಪಾರ್ಕ್ನತ್ತ ಸೆಳೆಯುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಯೋಜನೆ ರೂಪಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಪಾರ್ಕ್ನ ಸಮೀಪದಲ್ಲೇ ಇರುವುದರಿಂದಾಗಿ ಸರ್ಕಾರಿ ಕಚೇರಿಗೆ ಬಂದವರು ವಿಶ್ರಾಂತಿಗಾಗಿ ಗಾಂಧಿ ಪಾರ್ಕ್ಗೆ ಆಗಮಿಸುತ್ತಾರೆ. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಪಾರ್ಕ್ಗೆ ಆಗಮಿಸುತ್ತಾರೆ. ಬೆಳಗಿನ ವೇಳೆ ವಾಯುವಿಹಾರಕ್ಕೂ ನೂರಾರು ಮಂದಿ ಬರುತ್ತಾರೆ. ಹೀಗಾಗಿ ಪಾರ್ಕ್ನ ಸಮಗ್ರ ಅಭಿವೃದ್ಧಿಗೆ ಪಾಲಿಕೆ ಮುಂದಾಗಿದ್ದು, ಈ ಬಗ್ಗೆ ವಿಸ್ತೃತ ಯೋಜನೆ ರೂಪಿಸಿ, ಸರ್ಕಾರದ ಅನುದಾನ ಮಂಜುರಾತಿಗೆ ಕಳುಹಿಸಿದೆ.
ಪಾರ್ಕಿನಲ್ಲಿ ಹಾಳಾಗಿರುವ ಆಟಿಕೆಗಳನ್ನು ತೆಗೆದುಹಾಕಿ ಹೊಸ ಆಟಿಕೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ವಾಕಿಂಗ್ ಪಾಥ್ ಅಭಿವೃದ್ಧಿ, ಓಪನ್ ಜಿಮ್ ನಿರ್ಮಾಣ ಮಾಡಲು ಉದ್ದೇಶಿಲಾಗಿದೆ. ಈಜುಕೊಳ ಆಭಿವೃದ್ಧಿಗೂ ತೀರ್ಮಾನಿಸಲಾಗಿದೆ.
ಇದಲ್ಲದೆ ಪಾರ್ಕ್ನಲ್ಲಿ ಅಕ್ವೇರಿಯಂಗಳಲ್ಲಿ ಇನ್ನಷ್ಟ ಬಣ್ಣಬಣ್ಣದ ಮೀನುಗಳನ್ನು ಸಾಕಣೆ ಮಾಡುವ ಮೂಲಕ ಮತ್ಸ್ಯ ಅಧ್ಯಯನಕ್ಕೂ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಭದ್ರಾ ಜಲಾಶಯದ ಕಾಮಗಾರಿ ಗುಣಮಟ್ಟ ತನಿಖೆಗೆ ಸಮಿತಿ ರಚನೆ: ಸಚಿವ ಈಶ್ವರಪ್ಪ