ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಇದು ಹೆಚ್ಚುವರಿ ಜವಾಬ್ದಾರಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಆಗಿಯೂ ಮುಂದುವರೆಯಲಿದ್ದಾರೆ. ಇಂದು ಮಧ್ಯಾಹ್ನ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಸ್ನೇಹಲ್ ಅವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡರು.
13 ದಿನಗಳಲ್ಲಿ ಕುಲಸಚಿವರ ಬದಲಾವಣೆ: ಜೂನ್ 27ರಂದು ರಾಜ್ಯ ಸರ್ಕಾರ ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಕಣ್ಣನ್ ಅವರನ್ನು ಕುವೆಂಪು ವಿವಿಯ ಕುಲಸಚಿವರಾಗಿ ನೇಮಕ ಮಾಡಿತ್ತು. ಪ್ರೊ. ಕಣ್ಣನ್ ಇದೇ ವಿವಿಯಲ್ಲಿ ಪರಿಕ್ಷಾಂಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈಗ ಸರ್ಕಾರ ಪ್ರೊ. ಕಣ್ಣನ್ ಅವರ ಜಾಗಕ್ಕೆ ಸ್ನೇಹಲ್ ಸುಧಾಕರ್ ಲೋಖಂಡೆ ಅವರನ್ನು ನೇಮಿಸಿದೆ. ಪ್ರೊ. ಕಣ್ಣನ್ ಅವರಿಗೆ ಸರ್ಕಾರ ಇನ್ನೂ ಯಾವುದೇ ಹುದ್ದೆ ನೀಡಿಲ್ಲ.
ನೇಮಕವಾಗದ ನೂತನ ಕುಲಪತಿ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಇನ್ನೂ ನೂತನ ಕುಲಪತಿಗಳನ್ನು ರಾಜ್ಯಪಾಲರು ನೇಮಕ ಮಾಡಿಲ್ಲ. ಜುಲೈ 31ಕ್ಕೆ ಈ ಹಿಂದಿನ ಕುಲಪತಿ ಪ್ರೊ. ವೀರಭದ್ರಪ್ಪ ನಿವೃತ್ತಿಯಾಗಿದ್ದಾರೆ.