ಶಿವಮೊಗ್ಗ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪಿಂಕ್ ಬೂತ್ ರಚನೆ ಮಾಡಿ ಕೊರೊನಾ ಲಸಿಕೆಯನ್ನು ನೀಡಲಾಯಿತು.
ಇಲ್ಲಿನ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಸಲುವಾಗಿ ಆರೋಗ್ಯ ಕೇಂದ್ರವನ್ನು ಪಿಂಕ್ ಬೂತ್ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಓ ಶ್ರೀಮತಿ ವೈಶಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ದಿನಾಚರಣೆಯ ಅಂಗವಾಗಿ ಸಾಂಕೇತಿಕವಾಗಿ ಮಹಿಳೆಯರನ್ನು ಗೌರವಿಸುವುದಕ್ಕಾಗಿ ಪಿಂಕ್ ಬೂತ್ ರಚನೆ ಮಾಡಲಾಗಿದೆ ಎಂದರು.
ನಮ್ಮಲ್ಲಿ ಹೆಲ್ತ್ ಕೇರ್ ವರ್ಕರ್ಸ್ಗೆ ಎರಡು ಡೋಸ್ ಸೇರಿ ಶೇ 120 ರಷ್ಟು ಪ್ರಗತಿ ಸಾಧಿಸಲಾಗಿದೆ. ಫ್ರಂಟ್ ಲೈನ್ ವರ್ಕರ್ಸ್ಗೆ ಶೇ 69 ರಷ್ಟು ಪ್ರಗತಿಯಾಗಿದೆ. ಇದುವರೆಗೂ ಮೂರನೇ ಹಂತದಲ್ಲಿ 1,600 ಜನರಿಗೆ ಲಸಿಕೆ ನೀಡಲಾಗಿದೆ ಎಂದರು.
ಈಗ ಜಿಲ್ಲೆಯಲ್ಲಿ 41 ಸರ್ಕಾರಿ ಹಾಗೂ 8 ಖಾಸಗಿ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಮಾತನಾಡಿ, ಜನವರಿಯಲ್ಲಿ ಲಸಿಕೆ ಹಾಕಲು ಪ್ರಾರಂಭಿಸಲಾಗಿದೆ. ಈ ಲಸಿಕಾ ಕಾರ್ಯಕ್ರಮ ಇನ್ನೂ 3 ತಿಂಗಳು ನಡೆಸಲಾಗುವುದು. ಸದ್ಯ 41 ಕೇಂದ್ರಗಳಿದ್ದು, ಮುಂದೆ ಇದನ್ನು 93 ಕೇಂದ್ರಗಳಿಗೆ ಏರಿಸಲಾಗುವುದು ಎಂದರು.
ಇದನ್ನೂ ಓದಿ.. ನರ ಭಕ್ಷಕನ ಅಟ್ಟಹಾಸ.. 8 ವರ್ಷದ ಬಾಲಕನನ್ನು ತಿಂದು ಹಾಕಿದ ಹುಲಿ
60 ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ರಜಿಸ್ಟರ್ ಮಾಡಲು ಆಧಾರಕಾರ್ಡ್, ತಮ್ಮ ಮೊಬೈಲ್ ತರಬೇಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಇ- ಸಮೀಕ್ಷೆ ನಡೆಸಲಾಗುವುದು ಎಂದು ಡಿಹೆಚ್ಓ ರಾಜೇಶ್ ಸುರಗಿಹಳ್ಳಿ ತಿಳಿಸಿದರು. ಕೊನೆಯಲ್ಲಿ ಜಿ.ಪಂ. ಸಿಇಓ ಕೋವಿಡ್ ಲಸಿಕೆ ಪಡೆದುಕೊಂಡರು.