ಶಿವಮೊಗ್ಗ: ಭಟ್ಕಳದಿಂದ ಕಾರಿನಲ್ಲಿ ಬಂದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಖದೀಮರನ್ನು ಸಾಗರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಆರೋಪಿಗಳು ಸಾಗರದ ವರದಹಳ್ಳಿ ಕಡೆ ಹೋಗುವ ದಾರಿಯಲ್ಲಿ ಸಿಲ್ವರ್ ಬಣ್ಣದ TOYOTA ETIOS ಕಾರನ್ನು ನಿಲ್ಲಿಸಿ ದಾರಿಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಸ್ತಿನಲ್ಲಿದಿದ್ದನ್ನು ಕಂಡು ಕಾರನ್ನು ಬಿಟ್ಟು ಪರಾರಿ ಆಗಲು ಯತ್ನಿಸಿದ್ದಾರೆ.
ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಕಾರು ಬಿಟ್ಟು ಓಡಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ್ (26), ಸುಹೇಲ್ (32) ,ಮೊಹಮ್ಮದ್ ಅಕ್ರಂ (18), ಸಮೀರ್ (21) , ಅಬ್ದುಲ್ ಮೊಹೀಂ (21) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮಚ್ಚು , 2 ಕಬ್ಬಿಣದ ರಾಡು, 1 ಹಗ್ಗ ,1 ಮೆಣಸಿನ ಪುಡಿ ಪ್ಯಾಕೆಟ್, ಕಾರಿನ ಡಿಕ್ಕಿಯಲ್ಲಿ ಒಂದು ಮರದ ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಸಾಗರದ ಎಎಸ್‌ಪಿ ಯತೀಶ್ ಎನ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಹಾಬಲೇಶ್ವರ, ಎಎಸ್‌ಐ ಶಿವಕುಮಾರ್, ದಪೇದಾರ್‌ಗಳಾದ ದಿವಾಕರ ನಾಯ್ಕ, ಜಯೇಂದ್ರ, ನಾಗರಾಜ ಮತ್ತು ಪೋಲೀಸ್ ಕಾನ್ಸ್ಟೇಬಲ್‌ಗಳಾದ ಕಾಳಾನಾಯ್ಕ, ಮಲ್ಲೇಶ್, ರವಿ ಹರಿಜನ, ಚಾಲಕರಾದ ಮಲ್ಲನಗೌಡ ಮತ್ತು ವೆಂಕಟೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದರೋಡೆ ಕೋರರನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.