ಶಿವಮೊಗ್ಗ: ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಹಾಗೂ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಆರೋಗ್ಯ ಇಲಾಖೆಯ ಒಳ ಹಾಗೂ ಹೊರ ಗುತ್ತಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು, ಸರ್ಕಾರ ನಮ್ಮನ್ನು ಜೀತದಾಳುಗಳ ರೀತಿ ನೋಡುತ್ತಿದೆ. ಮೊದಲು ಈ ಜೀತದಾಳು ಪದ್ಧತಿ ತೊಲಗಲಿ ಎಂದು ಆಗ್ರಹಿಸಿದರು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಸದ್ಯ ಕೊರೊನಾ ಇರುವ ಕಾರಣ ಎಲ್ಲರೂ ಮೊದಲು ಕರ್ತವ್ಯಕ್ಕೆ ಹಾಜರಾಗಿ. ಪ್ರತಿಭಟನೆ, ಧರಣಿ ಮಾಡುವುದು ನಿಮ್ಮ ಹಕ್ಕು. ಆದರೆ ಕೊರೊನಾ ವೇಳೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ಸಿಎಂ ಜೊತೆ ಮಾತನಾಡಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಆದರೂ ಪ್ರತಿಭಟನೆ ನಡೆಸುತ್ತೇವೆ ಎಂದರೆ ಅದರ ಪರಿಣಾಮ ಎದುರಿಸಿ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದರು.
ಇದಕ್ಕೆ ಜಗ್ಗದ ನೌಕರರು ನಮ್ಮ ರಾಜ್ಯಮಟ್ಟದ ಸಂಘಟನೆ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದರು.