ಶಿವಮೊಗ್ಗ: ವಿಐಎಸ್ಪಿ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ) ಉಳಿಸುವ ನಿಟ್ಟಿನಲ್ಲಿ ರಾಜಕಾರಣದ ಪಾತ್ರ ಪ್ರಮುಖವಾಗಿದೆ. ಚುನಾವಣಾ ಬಹಿಷ್ಕಾರ ಹಾಕುವುದಾಗಿ ಹೇಳಿದರೆ ಎಲ್ಲಾ ರಾಜಕಾರಣಿಗಳು ಕಾರ್ಖಾನೆ ಉಳಿಸುವ ಚಿಂತನೆ ನಡೆಸಬಹುದು ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದ ವಿಐಎಎಸ್ಪಿ ಕಾರ್ಖಾನೆ ಉಳಿಸಿ ಎಂದು ಅನುದಾನಿತ ಶಾಲಾ ಮಕ್ಕಳು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಐಎಸ್ಪಿಗೆ ನಾವೆಲ್ಲಾ ಸಂಬಂಧಪಟ್ಟವರಾದ ಕಾರಣ, ಕಾರ್ಖಾನೆ ಉಳಿವಿನ ಬಗ್ಗೆ ಹೋರಾಟ ಮಾಡುತ್ತೇವೆ. ಈ ಕಾರ್ಖಾನೆ ನಂಬಿಕೊಂಡು ಸಾಕಷ್ಟು ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಕಾರ್ಖಾನೆ ಮುಚ್ಚಿದರೆ ಕಾರ್ಮಿಕರು, ಮಕ್ಕಳು ಬೀದಿ ಪಾಲಾಗುತ್ತಾರೆ. ಇಂದು ಕೆಲವೇ ಕೆಲವು ಮಕ್ಕಳು ಮಾತ್ರ ಹೋರಾಟಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ಹೋರಾಟಕ್ಕೆ ಬರುತ್ತಾರೆ.
ಇಂದು ನಾವು ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇವೆ. ನಿನ್ನೆ ಉಡುಪಿಯ ಪೇಜಾವರ ಶ್ರೀಗಳು ಬಂದಿದ್ದರು. ಇದು ರಾಜಕೀಯ ಪ್ರೇರಿತವಿಲ್ಲ, ಮುಂದಿನ ಪೀಳಿಗೆಗೆ ಮತ್ತು ಕಾರ್ಮಿಕರ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಹರಿಸಿಬೇಕು. ಕಾರ್ಖಾನೆ ಉಳಿವಿಗಾಗಿ ಕನಿಷ್ಟ 500 ಕೋಟಿ ರೂ. ಬಂಡವಾಳ ಬೇಕಾಗುತ್ತದೆ. ಇದಕ್ಕೆ ರಾಜಕೀಯ ಇಚ್ಛಾ ಶಕ್ತಿ ಬಹಳ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ತಡವಾಗಿ ಬಂದಿದ್ದಕ್ಕೆ ಸನ್ಮಾನ ಬೇಡವೆಂದ ಟೆನ್ನಿಸ್ ದಿಗ್ಗಜ; ಇನ್ನೆರಡು ದಿನದಲ್ಲಿ ಕಾರ್ಯಕ್ರಮ
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರು ಕಟ್ಟಿದ ಕಾರ್ಖಾನೆಯನ್ನು ಉಳಿಸಬೇಕಿದೆ. ವಿಶ್ವೇಶ್ವರಯ್ಯನವರು ಸುಮಾರು ನಾಲ್ಕು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಉಕ್ಕಿನ ನಗರವಾಗಿದ್ದ ಭದ್ರಾವತಿ ಈಗ ಬೆಂಕಿ ನಗರವಾಗುತ್ತ ಸಾಗುತ್ತಿದೆ. ಭದ್ರಾ ನದಿ ದಂಡೆಯ ಮೇಲೆ ಇರುವ ಭದ್ರಾವತಿ ಕಾರ್ಖಾನೆ ಹಾಗೆಯೇ ಉಳಿಯಬೇಕಿದೆ. ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲಾಗಿದೆ. ಈಗ ವಿಐಎಸ್ಪಿ ಕಾರ್ಖಾನೆ ಮುಚ್ಚಿದರೆ ಭದ್ರಾವತಿಯ ಗತಿ ಏನು ಎಂದು ಯೋಚಿಸಬೇಕಿದೆ ಎಂದರು.
102 ವರ್ಷದ ಇತಿಹಾಸ: ಈ ಕಾರ್ಖಾನೆಯನ್ನು 1918-19ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಆರಂಭದಲ್ಲಿ 19 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖನೆಯಲ್ಲಿ ತಯಾರಾದ ಕಬ್ಬಿಣ ಮತ್ತು ಉಕ್ಕುಗಳು ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಅಷ್ಟೊಂದು ಉತ್ಕೃಷ್ಠವಾದ ಕಬ್ಬಿಣ ಮತ್ತು ಉಕ್ಕು ಈ ಕಾರ್ಖಾನೆಯಲ್ಲಿ ತಯಾರಿಸುತ್ತಿದ್ದರು.
ಇದನ್ನೂ ಓದಿ: ಜೆಡಿಎಸ್ ಅವಹೇಳನ ಮಾಡಲು ಸುರ್ಜೆವಾಲಗೆ ನಾಚಿಕೆ ಆಗಬೇಕು: ಹೆಚ್‌ಡಿಕೆ