ಶಿವಮೊಗ್ಗ: ನಿನ್ನೆ ಮ್ಯಾಕ್ಸ್ ಆಸ್ಪತ್ರೆ ಬಳಿ ದೊರೆತ ಹತ್ತು ಸಾವಿರ ರೂಪಾಯಿ ಹಣ ವಾರಸುದಾರರಿಗೆ ಒಪ್ಪಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೃದಯ ಸಂಬಂಧಿ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ನಿನ್ನೆ ಹಣ ಕಳೆದುಕೊಂಡಿದ್ದರು. ಹತ್ತು ಸಾವಿರ ರೂಪಾಯಿ ಹಣ ತೀರ್ಥಹಳ್ಳಿ ತಾಲೂಕು ಬಾಳೆಹಿತ್ಲು ಗ್ರಾಮದ ಉದಯ್ ಕುಮಾರ್ ಎಂಬುವವರಿಗೆ ಸೇರಿದೆ. ಇದನ್ನು ಖಚಿತಪಡಿಸಿಕೊಂಡ ಪೊಲೀಸರು, ಉದಯ್ ಕುಮಾರ್ಗೆ ಹಣ ಹಿಂತಿರುಗಿಸಿದ್ದಾರೆ. ಉದಯ್ ಕುಮಾರ್ಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಚಿಕಿತ್ಸೆ ಸಲುವಾಗಿ ಆಗಾಗ ಮ್ಯಾಕ್ಸ್ ಆಸ್ಪತ್ರೆಗೆ ಬರುತ್ತಿದ್ದರು. ಬುಧವಾರ ಚಿಕಿತ್ಸೆಗೆ ಬಂದಿದ್ದ ಉದಯ್ ಕುಮಾರ್ ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದರು. ನಂತರ ಹೃದಯ ಸಂಬಂಧಿ ಸ್ಕ್ಯಾನಿಂಗ್ ಮಾಡಿಸಬೇಕಿತ್ತು. ಇದಕ್ಕೆ ಸಮಯವಿದ್ದಿದ್ದರಿಂದ ಪಕ್ಕದ ಹೋಟೆಲ್ನಲ್ಲಿ ಕಾಫಿ ಕುಡಿಯಲು ತೆರಳಿದ್ದರು. ಈ ವೇಳೆ ಜೇಬಿನಲ್ಲಿದ್ದ ಹಣ ಬೀಳಿಸಿಕೊಂಡಿದ್ದರು. ಆಸ್ಪತ್ರೆ ಮುಂಭಾಗ ರಸ್ತೆಯಲ್ಲಿ ಬಿದ್ದಿದ್ದ ಹಣ ಶಿಕ್ಷಕ ಶರಣಪ್ಪ ಎಂಬುವರಿಗೆ ಸಿಕ್ಕಿತ್ತು. ಸಿಕ್ಕ ಹಣವನ್ನು ಅವರು ಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಹಣ ಯಾರಿಗೆ ಸೇರಿದ್ದು ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ನಡುವೆ ಹಣ ಕಳೆದುಕೊಂಡಿದ್ದ ಉದಯ್ ಕುಮಾರ್ ಆಸ್ಪತ್ರೆ ಸಿಬ್ಬಂದಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಅಲ್ಲದೆ ಹಣ ಸಿಕ್ಕರೆ ಹಿಂದಿರುಗಿಸಿ ಎಂದು ಮೊಬೈಲ್ ನಂಬರ್ ನೀಡಿದ್ದರು. ಇದಿಷ್ಟೇ ಅಲ್ಲದೆ ಸಮೀಪದ ಮೆಡಿಕಲ್ ಶಾಪ್ನಲ್ಲೂ ಹಣ ಕಳೆದುಕೊಂಡಿರುವ ಕುರಿತು ತಿಳಿಸಿ ಹೋಗಿದ್ದರು. ಹಣ ಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ, ಉದಯ್ ಕುಮಾರ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಪೂರ್ವಾಪರ ವಿಚಾರಿಸಿದ ಪೊಲೀಸರು ಉದಯ್ ಕುಮಾರ್ಗೆ ಹಣ ಹಿಂದಿರುಗಿಸಿದ್ದಾರೆ. ನಿನ್ನೆ ಈ ಸಂಬಂಧ ಈಟಿವಿ ಭಾರತ ವರದಿ ಮಾಡಿತ್ತು.