ಶಿವಮೊಗ್ಗ: ಒಂದು ವರ್ಷದ ಅವಧಿಯಲ್ಲಿ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ವಿವರಗಳನ್ನು ನೀಡಿದರು.
ಅಂತರ್ಜಲ ಯೋಜನೆ: ಅಂತರ್ಜಲ ಯೋಜನೆಯಡಿ ಜಿಲ್ಲೆಯಲ್ಲಿ 27,754 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈಗಾಗಲೇ 1,444 ಕಾಮಗಾರಿಗಳು ಆರಂಭಗೊಂಡಿವೆ. ಕಳೆದ ಸಾಲಿನಲ್ಲಿ 28 ಕೆರೆಗಳನ್ನು 5.20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, 2.40 ಕೋಟಿ ರೂ. ವೆಚ್ಚದಲ್ಲಿ 14 ಕೆರೆಗಳಿಗೆ ಈಗಾಗಲೇ ಕಾಯಕಲ್ಪ ನೀಡಲಾಗಿದೆ. ಈ ವರ್ಷ ಜಿಲ್ಲೆಯ 281 ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 181 ಕೆರೆಗಳ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಜಲ ಜೀವನ್ ಮಿಷನ್: ಪ್ರತಿ ಮನೆಗೆ ಶುದ್ಧ ನೀರು ಪೂರೈಸುವ ಮನೆಮನೆಗೆ ಗಂಗೆ ಯೋಜನೆಯಡಿ ಜಿಲ್ಲೆಯಲ್ಲಿ 2,88,717 ಕುಟುಂಬಗಳಿಗೆ 1,176 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ 369 ಕೋಟಿ ರೂ. ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ: ನರೇಗಾ ಅಡಿ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇವಲ 4 ತಿಂಗಳ ಅವಧಿಯಲ್ಲಿ 22.47 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿರುವುದು ದಾಖಲೆಯಾಗಿದೆ. ಈ ವರ್ಷ ಹೊಸದಾಗಿ 6,822 ಹೊಸ ಉದ್ಯೋಗ ಚೀಟಿಗಳನ್ನು ವಿತರಿಸಿದ್ದು, 4.80 ಕೋಟಿ ರೂ. ಕೂಲಿಯನ್ನು ಈಗಾಗಲೇ ಪಾವತಿಸಲಾಗಿದೆ. ರಾಜ್ಯದಲ್ಲಿ 85 ಸಾವಿರಕ್ಕೂ ಅಧಿಕ ರೈತರು ತಮ್ಮ ಜಮೀನುಗಳಲ್ಲಿ ಕಂದಕ ಬದು ಹಾಗೂ 35 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿರುವುದು ದಾಖಲೆಯಾಗಿದೆ ಎಂದರು.
ಘನತ್ಯಾಜ್ಯ ವಿಲೇವಾರಿ: ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಇದೇ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ 50 ಗ್ರಾಮ ಪಂಚಾಯತ್‍ಗಳ ಪ್ರಸ್ತಾವನೆ ಸರ್ಕಾರ ಅನುಮೋದಿಸಿದ್ದು, ವಾಹನ ಖರೀದಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಗ್ರಾಮೀಣ ರಸ್ತೆ ಅಭಿವೃದ್ಧಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ 3,620 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 909 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ 20,63 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಪ್ರಸ್ತಾವನೆ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಪ್ರವಾಹದಿಂದ ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕಾಗಿ 1500 ಕೋಟಿ ರೂ. ವಿಶೇಷ ಅನುದಾನ ಒದಗಿಸಲಾಗಿದ್ದು, ಒಟ್ಟು 8,972 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ರಾಜ್ಯದ ಎಲ್ಲಾ 6,012 ಗ್ರಾಪಂ ಕಚೇರಿ ಕಟ್ಟಡಗಳಿಗೆ 3.4ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಕುಡಿಯುವ ನೀರು ಪೂರೈಕೆ: ರಾಜ್ಯದ 49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ರೂ. ಹಾಗೂ ಇತರ ತಾಲೂಕುಗಳಿಗೆ ತಲಾ 50 ಲಕ್ಷ ರೂ. ಮೊತ್ತ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 474 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿದ್ದು, 1.15 ಕೋಟಿ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಹೇಳಿದರು.