ಶಿವಮೊಗ್ಗ: ಜೂನ್ ಪ್ರಾರಂಭವಾದ್ರೂ ಮಳೆರಾಯನ ಸುಳಿವಿಲ್ಲ. ಮಳೆ ಇಲ್ಲದೆ ಇಳೆ ಬಿರುಕು ಬಿಟ್ಟಿದೆ. ಭೂಮಿಯ ಮೇಲಿನ ಸರ್ವ ಜೀವಿಗಳಿಗೂ ನೀರಿನ ಅವಶ್ಯಕತೆ ಇದೆ. ವರುಣ ದೇವ ಭೂಮಿಗೆ ಬರಲಿ ಎಂದು ನಗರದಲ್ಲಿ ಶಿವನಿಗೆ ಎಳನೀರಿನ ಅಭಿಷೇಕ ಹಾಗೂ ಪರ್ಜನ್ಯ ಜಪವನ್ನು ನಡೆಸಲಾಯಿತು.
ನಗರದ ಹೊರವಲಯದ ಹರಕರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೊಜೆ ಹಾಗೂ ಪರ್ಜನ್ಯ ಜಪವನ್ನು ಮಾಡಲಾಯಿತು. ನಗರದ ಸೌರಭ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಪೊಜೆ ಹಾಗೂ ಜಪಗಳು ಮತ್ರೂರಿನ ಭೋದನಾನೇಂದ್ರ ಸರಸ್ವತಿ ಸ್ವಾಮಿಜೀಗಳ ನೇತೃತ್ವದಲ್ಲಿ ನಡೆಯಿತು.
ಮಳೆರಾಯ ಭೂಮಿಯ ಮೇಲೆ ಮುನಿಸಿಕೊಂಡಾಗ ರಾಮೇಶ್ವರನಿಗೆ ಎಳನೀರಿನ ಅಭಿಷೇಕ ಮಾಡಿದರೆ ವರುಣ ಧರೆಗಿಳಿಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ ಭೋದನಾನೇಂದ್ರ ಸ್ವಾಮೀಜಿಗಳ ನೆತೃತ್ವದಲ್ಲಿ, ಭಕ್ತರು ಎಳನೀರು ಅಭಿಷೇಕ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜೆಯಲ್ಲಿ ಪರ್ಜನ್ಯ ಜಪವನ್ನು ಬ್ರಾಹ್ಮಣರು ನಡೆಸಿಕೊಟ್ಟರು.
ಪರ್ಜನ್ಯ ಜಪ ಮಾಡಿ ಇಂದ್ರನಿಗೆ ಪ್ರಾರ್ಥನೆ ಸಲ್ಲಿಸಿ, ಎಳನೀರಿನ ಅಭಿಷೇಕ ಮಾಡಿದ್ರೆ ದೇವತೆಗಳು ಸಂತೃಪ್ತರಾಗಿ ಮಳೆಯನ್ನು ಸುರಿಸುತ್ತಾರೆ. ಇದರಿಂದ ಮಳೆ ಬಾರದ ಸಮಯದಲ್ಲಿ ಈ ರೀತಿಯ ವಿಶೇಷ ಪೂಜೆ ನಡೆಸಲಾಗುತ್ತೆ ಎನ್ನುತ್ತಾರೆ ಸೌರಭ ಸಂಸ್ಥೆಯ ಕೆ.ಬಿ.ಪ್ರಸನ್ನ ಕುಮಾರ್.
ಮಳೆ ಬಾರದೆ ಹೋದಾಗ ಈ ರೀತಿ ವಿಶೇಷ ಪೊಜೆ ಹಾಗೂ ಜಪ ನಡೆಸಿದಾಗ ಮಳೆ ಬಂದ ಉದಾಹರಣೆಗಳಿವೆ ಎಂದು ಭೋದನಾನೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.