ಶಿವಮೊಗ್ಗ: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಆರು ತಿಂಗಳು ಕಳೆದಿದೆ. ಆದರೂ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಇನ್ನೂ ಅಭಿಮಾನಿಗಳು ಕಳೆದುಕೊಂಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ತಾಲೂಕಿನ ಭೀಮನೇರಿ ಗ್ರಾಮಸ್ಥರು ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಎರಡು ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಭೀಮನೇರಿ ಗ್ರಾಮದ ಮುಖ್ಯ ವೃತ್ತದಲ್ಲಿ ಅಪ್ಪು ಪುತ್ಥಳಿಯನ್ನು ಸ್ಥಾಪಿಸಲಾಗಿದೆ.
ಪುನೀತ್ ಇಹಲೋಕ ತ್ಯಜಿಸಿದ ನಂತರ ಅವರ ನೆನಪಿನಲ್ಲಿ ಏನಾದರೂ ಮಾಡಬೇಕೆಂದುಕೊಂಡಿದ್ದ ಗ್ರಾಮಸ್ಥರು ತಾವೇ ಯೋಚಿಸಿ, ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಸ್ಥಾಪಿಸಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ತಮ್ಮೂರಿನಲ್ಲಿಯೇ ಹಣವನ್ನು ಸಂಗ್ರಹಿಸಿದ್ದಾರೆ. ಗ್ರಾಮದ ಗುರು- ಹಿರಿಯರು ಸೇರಿಕೊಂಡು ಪುನೀತ್ ಅಗಲಿದ ಆರು ತಿಂಗಳಿಗೆ ಪುತ್ಥಳಿ ಸ್ಥಾಪಿಸಿದ್ದಾರೆ.
ಪುತ್ಥಳಿ ಸ್ಥಾಪನೆಯ ಸವಿನೆನಪಿಗೆ ಗ್ರಾಮಸ್ಥರು ರಕ್ತದಾನ ಶಿಬಿರ ನಡೆಸಿದ್ದು, ಗ್ರಾಮದ ಯುವಕರು ರಕ್ತದಾನ ಮಾಡಿದ್ದಾರೆ. ಅಲ್ಲದೆ, ಅನ್ನಸಂತರ್ಪಣೆ ನಡೆಸಿದ್ದಾರೆ. ಈ ಗ್ರಾಮದಲ್ಲಿ ಪುನೀತ್ರ ನ್ನು ನೆಚ್ಚಿನ ನಟರನ್ನಾಗಿ ಅಲ್ಲದೆ ತಮ್ಮಲ್ಲಿ ಒಬ್ಬನಾಗಿ ನೋಡಿದ್ದಾರೆ. ಗ್ರಾಮಸ್ಥರು ಪುತ್ಥಳಿಗೆ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆದಿದ್ದಾರೆ.
ಪುತ್ಥಳಿಯ ಕೆತ್ತನೆಯನ್ನು ಕೆಳದಿಪುರದ ವಸಂತನಾಯ್ಕ್ ಅವರು ಮಾಡಿದ್ದಾರೆ. ಪುನೀತ್ ಅವರ ನಗುಮುಖದ ಭಾವವನ್ನು ಕೆತ್ತಲು ಸಾಕಷ್ಟು ಕಷ್ಟಕರವಾಗಿದ್ರು ಸಹ ತಮಗೆ ತಿಳಿದಂತೆ ಕೆತ್ತನೆ ಮಾಡಲಾಗಿದೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದವರು ಎನ್ನುತ್ತಾರೆ ಕಲಾವಿದ.
ಓದಿ: 'ಜೀವನ ಎಷ್ಟೊಂದು ದುರ್ಬಲ ಎಂಬುದಕ್ಕೆ ಮತ್ತೊಂದು ಉದಾಹರಣೆ': ಗಾಯಕ ಕೆಕೆ ನಿಧನಕ್ಕೆ ಗಣ್ಯರ ಕಂಬನಿ