ಶಿವಮೊಗ್ಗ: ನಗರದ ಕುವೆಂಪು ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಇಂಡಿಗೋ ವಿಮಾನದಲ್ಲಿ ಮೊದಲ ಬಾರಿಗೆ ಬಂದ ಪ್ರಯಾಣಿಕರು ತಮ್ಮ ಅನುಭವನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.
ಲಕ್ಷ್ಮೀದೇವಿ ಎಂಬುವರು ಮಾತನಾಡಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಬಂದಿದ್ದು ತುಂಬ ಖುಷಿ ಕೊಟ್ಟಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ರಸ್ತೆ ಪ್ರಯಾಣ ಕಷ್ಟಕರವಾಗಿತ್ತು. ಕಷ್ಟಪಟ್ಟು ಬೆಂಗಳೂರಿಗೆ ಹೋಗಬೇಕಿತ್ತು. ನಂತರ ರೈಲು ಬಂತು. ಈಗ ಶಿವಮೊಗ್ಗಕ್ಕೆ ವಿಮಾನ ಸೇವೆ ಆರಂಭವಾಗಿರುವುದು ಬಹಳ ಸಂತೋಷವಾಗಿದೆ. ಮೊದಲ ದಿನವೇ ನಾನು ಈ ಫ್ಲೈಟ್ನಲ್ಲಿ ಸಂತೋಷವಾಯಿತು. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾರ್ಯಾರು ಕೆಲಸ ಮಾಡಿದ್ದರೂ ಅವರಿಗೆ ಅಭಿನಂದನೆಗಳು. ಅಲ್ಲದೆ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಕೆಲಸ ಮಾಡಿದವರ ಜೊತೆ ನಾವು ಇಂದು ವಿಮಾನದಲ್ಲಿ ಬಂದುಳಿದಿದ್ದು ನಮಗೆ ಸಂತೋಷವಾಗಿದೆ. ಈ ನಗರದ ಬೆಳವಣಿಗೆಯ ಜೊತೆ ನಮ್ಮ ಕನಸಿಗೂ ಇದು ಬುನಾದಿ ಹಾಕಿ ಕೊಟ್ಟಿದೆ ಎಂದು ಹೇಳಿದರು.
![shivamogga first plane](https://etvbharatimages.akamaized.net/etvbharat/prod-images/31-08-2023/19400551_smgplane.jpg)
ಶಿವಮೊಗ್ಗ ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್ ಅವರು ವಿಮಾನಯಾನದ ಅನುಭವ ಹಂಚಿಕೊಂಡಿದ್ದಾರೆ. ಶಿವಮೊಗ್ಗಕ್ಕೆ ಬಂದ ಮೊದಲ ವಿಮಾನದಲ್ಲಿ ನಾನು ಬಂದಿದ್ದು ಒಂದು ಅದ್ಭುತವಾದ ಅನುಭವವಾಗಿತ್ತು. ದಶಕಗಳ ಕನಸು ಇಂದು ನನಸಾಗಿದೆ. ಇದು ಶಿವಮೊಗ್ಗದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಆಗುವುದರಲ್ಲಿ ಎರಡನೇ ಮಾತಿಲ್ಲ. ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಇನ್ನೂ ಹೆಚ್ಚು ಬಳಸಿಕೊಂಡು ಶಿವಮೊಗ್ಗದ ಅಭಿವೃದ್ಧಿಗೆ ಸಹಾಯಕವಾಗುವಂತೆ ಮಾಡಬೇಕೆಂದರು.
ಮೊಹಮ್ಮದ್ ಇಬ್ರಾಹಿಂ ಎಂಬುವರು ಪ್ರತಿಕ್ರಿಯಿಸಿ, ಇದು ಒಂದು ಒಳ್ಳೆಯ ಅನುಭವವಾಗಿದೆ. ಆಗಸದಿಂದ ಶಿವಮೊಗ್ಗ ನೋಡಲು ತುಂಬ ಸುಂದರವಾಗಿ ಕಾಣುತ್ತಿತ್ತು. ತುಂಗ ಮತ್ತು ಭದ್ರಾ ನದಿಗಳ ನಡುವೆ ಇರುವ ವಿಮಾನ ನಿಲ್ದಾಣ ನೋಡಲು ಮನಮೋಹಕವಾಗಿದೆ. ಶಿವಮೊಗ್ಗ ನಗರಕ್ಕೆ ಬರಲು ಕುತೂಹಲ, ಸಂತೋಷವನ್ನು ಹೇಳಲು ಪಾರವೇ ಇಲ್ಲ, ಇದು ಸುಂದರ ಅನುಭವವಾಗಿದೆ. ನಾನು ಭಾರತ ಸರ್ಕಾರಕ್ಕೆ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಶಿವಮೊಗ್ಗ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
![first flight to shivamogga](https://etvbharatimages.akamaized.net/etvbharat/prod-images/31-08-2023/19400551_smgplaneas.jpg)
ನರಸಿಂಹ ಎಂಬುವವರು ಮಾತನಾಡಿ, ಮೊದಲ ವಿಮಾನದಲ್ಲಿ ನಾನು ಪ್ರಯಾಣ ಬೆಳೆಸಿದ್ದು, ನನಗೆ ತುಂಬ ಸಂತೋಷ ತಂದಿದೆ. ಇಂದು ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಶಿವಮೊಗ್ಗ ಜಲ್ಲೆ ಸೇರಿದಂತೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಧ್ಯ ಕರ್ನಾಟಕದ ಬಹು ದಿನದ ಕನಸು ಇಂದು ನನಸಾಗಿದೆ. ಬೆಂಗಳೂರಿನಿಂದ ಬಂದ ಮೊದಲ ವಿಮಾನದಲ್ಲಿ ನಾನು ಪ್ರಯಾಣ ಮಾಡಿದ್ದೇನೆ. ವಿಮಾನ ನಿಲ್ದಾಣದಿಂದ ಬದಲಾವಣೆಯ ಹಾದಿ ಪ್ರಾರಂಭವಾಗಲಿದೆ. ಹಿಂದೆ ಏರ್ಪೋರ್ಟ್ ಇಲ್ಲ ಎಂದು ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆಯುತ್ತಿರಲಿಲ್ಲ. ಇದು ಕೈಗಾರಿಕೆಯ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ದಿಕ್ಸೂಚಿ ಆಗಬಹುದು. ನಮ್ಮ ಪ್ರಯಾಣ ತುಂಬಾ ಚೆನ್ನಾಗಿತ್ತು, ನಾವು ಕೇವಲ 45 ನಿಮಿಷಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದೆವು ಅಂತಾ ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದ ಪ್ರಥಮ ನಾಗರಿಕ ವಿಮಾನ: ವಾಟರ್ ಸೆಲ್ಯೂಟ್ ಮೂಲಕ ಸ್ವಾಗತಿಸಿದ ಸಿಬ್ಬಂದಿ