ಶಿವಮೊಗ್ಗ: ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿರುವ ಕಾನೂನು ತೊಡಕುಗಳನ್ನು ನಿವಾರಿಸಿ, ಸಮಗ್ರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ನೀಡಿರುವ ಸಲಹೆಗಳನ್ನು ಅನುಷ್ಟಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಲ್ಲಿ ಪರಿಷತ್ ಸಭೆ ನಡೆಸಿ ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಣೆ ನಿಟ್ಟಿನಲ್ಲಿ ಕಾನೂನಿನಲ್ಲಿ ಇರುವ ತೊಡಕುಗಳು ಸೇರಿದಂತೆ 23 ಸಲಹೆಗಳನ್ನು ಪರಿಷತ್ ನೀಡಿದೆ. ಈ ಸಲಹೆಗಳ ಕುರಿತು ಸಮಾಲೋಚನೆ ನಡೆಸಿ, ಅಂತಿಮ ವರದಿಯನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಜುಲೈ 6 ಮತ್ತು 7 ರಂದು ತಜ್ಞರ ಸಭೆಯನ್ನು ನಡೆಸಲಾಗುವುದು ಎಂದರು.
ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ 2021-26 ನೇ ಸಾಲಿನವರೆಗೆ 'ಜನರ ಯೋಜನೆ' ಹೆಸರಿನಲ್ಲಿ ದೂರದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಮಹಿಳಾಭಿವೃದ್ಧಿ ಉದ್ದೇಶಿತ ಆಯವ್ಯಯ, ಮಕ್ಕಳ ಉದ್ದೇಶಿತ ಆಯವ್ಯಯ, ವಿಕಲಚೇತನರ ಉದ್ದೇಶಿತ ಆಯವ್ಯಯ, ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಅನುದಾನ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅನುದಾನ ಮೀಸಲಿಡಲಾಗುತ್ತಿದೆ. ಈ ಕುರಿತಾಗಿ ಪರಿಷತ್ ತನ್ನ ಸಲಹೆಗಳನ್ನು ನೀಡಿದೆ ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಡಿಪಿ ಸಭೆಗಳನ್ನು ನಡೆಸಬೇಕು. ಜಿಲ್ಲಾ ಯೋಜನಾ ಸಮಿತಿಯ ಪುನರಾಚನೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಪ್ರಸ್ತುತ ಕಂದಾಯ ಇಲಾಖೆ ನಿರ್ವಹಿಸುತ್ತಿದ್ದು, ಅದನ್ನು ಗ್ರಾಮೀಣಾಭಿವೃದ್ದಿ ಇಲಾಖೆಗೆ ವರ್ಗಾಯಿಸಬೇಕು. ಫಲಾನುಭವಿಗಳ ಆಯ್ಕೆ ಮತ್ತು ಅರ್ಜಿಗಳ ಪರಿಶೀಲನೆಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕು. ಜನನ, ಮರಣ ಹಾಗೂ ವಿವಾಹ ನೋಂದಣಿ ಕಾರ್ಯ ನೆರವೇರಿಸಲು ಗ್ರಾಮ ಪಂಚಾಯತ್‌ನಲ್ಲಿರುವ ಬಾಪೂಜಿ ಸೇವಾ ಕೇಂದ್ರದ ಮೂಲಕ ವೃದ್ದಾಪ್ಯ, ವಿಧವೆಯರ ಪ್ರಮಾಣ ಪತ್ರ, ವಾಸದ ದೃಢೀಕರಣ ಪತ್ರ ಹಾಗೂ ವಿತರಣಾ ಸೇವೆಗಳನ್ನು ಕೈಗೊಳ್ಳಬೇಕು.
ಸರ್ಕಾರಿ ಪ್ರಾಥಮಿಕ, ಫ್ರೌಢಶಾಲೆ ಮತ್ತು ಮೆಟ್ರಿಕ್ ಪೂರ್ವ ಹಾಗೂ ನಂತರದ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ಆಶ್ರಮ ಶಾಲೆಗಳು, ಪಶು ಚಿಕಿತ್ಸಾಲಯ ಸೇವಾ ವಿತರಣಾ ಘಟಕ ಹೀಗೆ ಗ್ರಾಮಕ್ಕೆ ಸಂಬಂಧಿಸಿದ ಮೇಲುಸ್ತುವಾರಿ ಮೇಲ್ವಿಚಾರಣೆ ಗ್ರಾಮ ಪಂಚಾಯತ್ ಗೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ ಎಂದರು.
ನಂತರ ಮಾತನಾಡಿದ ರಾಜ್ಯ ಪಂಚಾಯತ್ ಪರಿಷತ್ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ನಮ್ಮ ಪರಿಷತ್ ನೀಡಿದ 15 ಕ್ಕೂ ಹೆಚ್ಚಿನ ಅಂಶಗಳನ್ನು ಸಿಎಂ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಅದರ ಅನುಮೋದನೆಯನ್ನು ಇಂದು ಗ್ರಾಮಿಣಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ರವರು ಅನುಮೋದಿಸಿದ್ದಾರೆ. ಪಂಚಾಯತ್ ಪರಿಷತ್ ನೀಡಿದ ಸಲಹೆಗಳನ್ನು ಜಾರಿ ಮಾಡಿದ್ರೆ, ಗ್ರಾಮೀಣಾಭಿವೃದ್ದಿಯಲ್ಲಿ ನಜೀರ್ ಸಾಬ್, ಹೆಚ್.ಕೆ.ಪಾಟೀಲ್ ನಂತರ ಈಶ್ವರಪ್ಪನವರ ಯುಗ ಇದ್ದಂತೆ ಆಗುತ್ತದೆ ಎಂದರು.