ಶಿವಮೊಗ್ಗ: ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧವೇ ಹೊರತು ವೈಯುಕ್ತಿಕ ಲಾಭಕ್ಕಲ್ಲ. ಆದರೆ ಕೆಲವು ರಾಜಕಾರಣಿಗಳು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ ಯಾದವ್ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮತ್ತು ನಮ್ಮ ಸಂಘಟನೆ ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ನಮ್ಮ ವಿರುದ್ಧ ಯಾವುದೇ ಕಪ್ಪು ಚುಕ್ಕೆಗಳಿಲ್ಲ. ಯಾವುದೇ ಅವೈಜ್ಞಾನಿಕ ಕಾಮಗಾರಿಗಳು ಇರಲಿ ಅಥವಾ ಅನ್ಯಾಯವಾಗಲಿ, ಭ್ರಷ್ಟಾಚಾರವಾಗಲಿ ನಡೆಯುತ್ತಿದ್ದರೆ ಅದರ ವಿರುದ್ಧ ಧ್ವನಿಯೆತ್ತಿದ್ದೇವೆ. ಆದರೆ ನಮ್ಮ ಮೇಲೆ ವಿನಾಕಾರಣ ಕೆಲವು ರಾಜಕಾರಣಿಗಳು ಅಪಮಾನ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಇತ್ತೀಚೆಗೆ ಶರಾವತಿ ನಗರದ ಆದಿಚುಂಚನಗಿರಿ ಶಾಲೆ ಮುಂಭಾಗದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಬಾಕ್ಸ್ ಡ್ರೈನೇಜ್ ಕಾಮಗಾರಿ ನಡೆಯುತ್ತಿತ್ತು. ಇದರ ಲೋಪದೋಷಗಳ ಬಗ್ಗೆ ನಾಗರಿಕ ಹಿತರಕ್ಷಣಾ ವೇದಿಕೆ, ಅಣ್ಣಾಹಜಾರೆ ಹೋರಾಟ ಸಮಿತಿ ಸಚಿವರ ಗಮನಕ್ಕೆ ತಂದಿದ್ದು, ಸಚಿವರು ಪರಿಶೀಲನೆಗೆ ಆಗಮಿಸುವುದಾಗಿ ತಿಳಿಸಿದರು. ಆದರೆ ಅವರ ಆಗಮನಕ್ಕೆ ಮೊದಲೇ ನಮ್ಮ ಸಂಘಟನೆಯವರು ಇದ್ದಾಗ ಬಂದ ಕೆಲವು ರಾಜಕೀಯ ಮುಖಂಡರು ಏಕಾಏಕಿ ನಮ್ಮ ಮೇಲೆ ಸಲ್ಲದ ಆರೋಪಗಳನ್ನು ಮಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದನ್ನು ನಮ್ಮ ಸಂಘಟನೆ ಸಹಿಸುವುದಿಲ್ಲ. ಹಾಗಾಗಿ ಇಂತಹ ಹೋರಾಟ ಮಾಡುತ್ತಿದ್ದರೆ ಕೆಲವರು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಈ ಎಲ್ಲಾ ಘಟನೆಗಳಿಂದ ನನ್ನ ಮನಸ್ಸಿಗೆ ನೋವಾಗಿದೆ, ಅಪಮಾನವಾಗಿದೆ. ಆದರೆ ನಾನು ಮಾತ್ರ ನನ್ನ ಹೋರಾಟ ನಿಲ್ಲಿಸುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ನಮ್ಮ ಸಂಘಟನೆಯ ಹೋರಾಟ ಪ್ರಾಮಾಣಿಕವಾಗಿ ಮುಂದುವರೆಯುತ್ತದೆ. ಸಾರ್ವಜನಿಕರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಭೂಪಾಳಂ ಶಿವಸ್ವಾಮಿ, ಸುಬ್ರಮಣ್ಯ, ದೇವೇಂದ್ರ, ನಾಗರಾಜ್, ಶಿವಕುಮಾರ್, ಬಾಲಕೃಷ್ಣ ಇದ್ದರು.