ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಅದೆಷ್ಟೋ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಅವನ್ನು ಸರಿಪಡಿಸಿದ ಕೆಲವೇ ಅವಧಿಯೊಳಗೆ ಮತ್ತೆ ಗುಂಡಿಗಳಾಗಿವೆ. ಇದ್ರಿಂದ ವಾಹನ ಸವಾರರು ತಮ್ಮ ಸ್ಥಳ ತಲುಪಲು ಹರಸಾಹಸ ಪಡುವಂತಾಗಿದೆ.
ಮಳೆ ಹೆಚ್ಚಾಗಿ ಸುರಿಯೋದ್ರಿಂದ ಇಲ್ಲಿನ ರಸ್ತೆಗಳು ಬಹು ಬೇಗ ಗುಂಡಿಗಳಾಗುತ್ತವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುವುದು ಸವಾಲೇ ಆಗಿದ್ದು, ಪ್ರಯಾಣದ ಅವಧಿ ಹೆಚ್ಚಾಗುತ್ತದೆ. ಜತೆಗೆ ವಾಹನಗಳು ಬೇಗ ಹಾಳಾಗುತ್ತವೆ. ಅಲ್ಲದೇ ಇಂತಹ ರಸ್ತೆಯಿಂದ ಅನೇಕ ಸಾವು-ನೋವು ಸಂಭವಿಸುತ್ತವೆ. ಮಳೆಗಾಲದಲ್ಲಿ ರಸ್ತೆ ದುರಸ್ಥಿ ಸಾಧ್ಯವಾಗದ ಕಾರಣ ಮಳೆ ನಿಂತ ಮೇಲೆ ರಸ್ತೆ ದುರಸ್ಥಿ ಮಾಡಿಸಲಾಗುತ್ತದೆ.
ಮಳೆಗಾಲದಲ್ಲಿ ಹೆಚ್ಚಾಗಿ ರಸ್ತೆಯಲ್ಲಿ ಗುಂಡಿ ಬೀಳುತ್ತವೆ. ಈ ಗುಂಡಿಯನ್ನು ಮುಚ್ಚಲು ನಗರ ಮಟ್ಟದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳು ಕ್ರಮತೆಗೆದುಕೊಳ್ಳುತ್ತವೆ. ಅದೇ ರೀತಿ ಈ ವರ್ಷ ಗ್ರಾಮೀಣಾಭಿವೃದ್ಧಿ ಖಾತೆ ಇಲಾಖೆಯಿಂದ ಗ್ರಾಮಾಂತರ ರಸ್ತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಟಾರ್ ರಸ್ತೆಗಳಿಕ್ಕಿಂತ ಕ್ರಾಂಕ್ರಿಟ್ ರಸ್ತೆಗಳು ಬೇಗ ಗುಂಡಿಗಳಾಗುತ್ತದೆ. ಟಾರ್ ರಸ್ತೆಯಲ್ಲಿ ನೀರು ಒಳಗೆ ಇಂಗುತ್ತದೆ. ಆದರೆ, ಕ್ರಾಂಕ್ರಿಟ್ ರಸ್ತೆಯಲ್ಲಿ ಗುಂಡಿಗಳಾದ್ರೆ, ಅದನ್ನು ವೇಗವಾಗಿ ಮುಚ್ಚಲು ಆಗಲ್ಲ.
ಪದೇಪದೆ ಗುಂಡಿಗಳನ್ನ ಮುಚ್ಚುವ ಸರ್ಕಸ್ : ಶಿವಮೊಗ್ಗದ ಪ್ರಮುಖ ರಸ್ತೆಗಳು ಮಳೆಗಾಲದಲ್ಲಿ ಹದಗೆಟ್ಟಿದ್ದವು. ಮಳೆಗಾಲದಲ್ಲಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಿಸುವುದೇ ಕಷ್ಟಕರವಾಗಿತ್ತು. ಮಳೆಯ ನೀರು ಎಲ್ಲಿ ನಿಂತಿದೆ, ಯಾವುದು ಗುಂಡಿ, ಯಾವುದು ರಸ್ತೆ ಎಂದು ತಿಳಿಯಲು ಆಗದಷ್ಟು ಗುಂಡಿಗಳಾಗಿದ್ದವು.
ಪರಿಣಾಮ ಎಷ್ಟೋ ಬಾರಿ ದ್ವಿಚಕ್ರ ವಾಹನ ಸವಾರರು ಗುಂಡಿಯಲ್ಲಿ ಸಿಲುಕಿ ವಾಹನ ಮೇಲೆ ತೆಗೆಯಲು ಆಗದೆ ಪರದಾಡಿದ್ದಾರೆ. ಇನ್ನೂ ಅನೇಕ ಕಾರುಗಳು ಸಹ ಗುಂಡಿಯಲ್ಲಿ ಸಿಲುಕಿದ ಉದಾಹರಣೆಗಳಿವೆ. ಇದ್ರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚು.
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಗುಂಡಿಗಳಾದ ರಸ್ತೆಗಳು : ಕಳೆದ ಆಗಸ್ಟ್ನಲ್ಲಿ ಮಳೆಯಿಂದ ಗುಂಡಿ ಬಿದ್ದ ರಸ್ತೆಗಳನ್ನು ಮಹಾನಗರ ಪಾಲಿಕೆ ಮುಚ್ಚಿಸಿತ್ತು. ಪಾಲಿಕೆಯವರು ಎಷ್ಟು ಗುಂಡಿಗಳನ್ನು ಮುಚ್ಚಿಸಿದ್ದರೋ ಅಷ್ಟೇ ಗುಂಡಿಗಳು ಮತ್ತೆ ವೇಗವಾಗಿ ತೆರೆದಿವೆ. ಇದ್ರಿಂದ ನಗರದಲ್ಲಿ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.
ಒಂದು ಕಡೆ ಗುಂಡಿಗಳನ್ನು ಸರಿಪಡಿಸಿದ್ರೆ, ಮತ್ತೊಂದೆಡೆ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ರಸ್ತೆಗಳನ್ನು ಕಿತ್ತು ಹಾಕಲಾಗುತ್ತಿದೆ. ಸ್ಮಾರ್ಟ್ ಸಿಟಿಗಾಗಿ ವಿದ್ಯುತ್, ನೀರು ಪೈಪ್‌ಲೈನ್ ಹಾಕಲು ರಸ್ತೆಯನ್ನು ಗುಂಡಿ ಮಾಡಲಾಗಿದೆ. ಇವುಗಳನ್ನು ಮುಚ್ಚದೇ ಇರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಪಾಲಿಕೆ ವತಿಯಿಂದ ವಾರ್ಡ್‌ವಾರು ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ.
ನಗರದ ವಿಭಾಗ 1 ರಲ್ಲಿ ಒಟ್ಟು 62.15 ಲಕ್ಷ ರೂ. ಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ವಾರ್ಡ್ 13, 22 ಹಾಗೂ 23 ಕ್ಕೆ 10 ಲಕ್ಷ ರೂ., ವಾರ್ಡ್ 3 ಮತ್ತು 4ಕ್ಕೆ 12 ಲಕ್ಷ ರೂ., ವಾರ್ಡ್ 30 ಮತ್ತು 27ರ ಮುಖ್ಯ ರಸ್ತೆಯ ಗುಂಡಿ ಮುಚ್ಚಲು 5 ಲಕ್ಷ ರೂ., ಅದೇ ರೀತಿ 2, 8, ಹಾಗೂ 9ನೇ ವಾರ್ಡ್ ರಸ್ತೆ ಗುಂಡಿ ಮುಚ್ಚಲು 6.65 ಲಕ್ಷ ರೂ., ವಾರ್ಡ್ 7ರಲ್ಲಿ 4.50 ಲಕ್ಷ ರೂ. ಹಾಗೂ 1, 6, 17, 24 ಮತ್ತು 25ನೇ ವಾರ್ಡ್ ರಸ್ತೆ ಗುಂಡಿ ಮುಚ್ಚಿಸಲು 24 ಲಕ್ಷ ರೂ. ಖರ್ಚು ಮಾಡಲಾಗಿದೆ.
ನಗರದ ವಿಭಾಗ -2ರಲ್ಲಿ ವಾರ್ಡ್ ನಂಬರ್ 14ರ ಗುಂಡಿ ಮುಚ್ಚಲು 9.40 ಲಕ್ಷ ರೂ., ವಾರ್ಡ್ ನಂಬರ್ 26, 28, 29 ಹಾಗೂ 31ರಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು 10 ಲಕ್ಷ ಹಾಗೂ ವಾರ್ಡ್ 32 ಮತ್ತು 33ರಲ್ಲಿನ ರಸ್ತೆ ಗುಂಡಿ ಮುಚ್ಚಲು 4 ಲಕ್ಷ ರೂ. ಖರ್ಚು ಮಾಡಲಾಗಿದೆ. ಒಟ್ಟಾರೆ 7 ವಾರ್ಡ್ನ ರಸ್ತೆ ಗುಂಡಿ ಮುಚ್ಚಲು 23.4 ಲಕ್ಷ ರೂ. ಖರ್ಚು ಮಾಡಲಾಗಿದೆ.
ಆದರೆ, ಬೇಸಿಗೆ ಬರುಷ್ಟರಲ್ಲಿ ಮೇಲಿನ ಎಲ್ಲಾ ವಾರ್ಡ್ಗಳಲ್ಲಿ ಶೇ.70ರಷ್ಟು ಗುಂಡಿಗಳು ಮತ್ತೆ ಗುಂಡಿಗಳಾಗಿ ಮಾರ್ಪಟ್ಟಿದೆ. ಈ ಕುರಿತು ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರು ಮಾತನಾಡಿ, ಈ ಹಿಂದೆಯೇ ಪಾಲಿಕೆ ಆಯುಕ್ತರು ಹಾಗೂ ಡಿಸಿ ಅವರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ನಮ್ಮ ಮುಂದೆ ಹೋರಾಟವೊಂದೇ ಉಳಿದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳತ್ತ ಮುಖಮಾಡಿದ ವಿದ್ಯಾರ್ಥಿಗಳು.. ಖಾಸಗಿ ಸ್ಕೂಲ್‌ಗಳ ವ್ಯವಸ್ಥೆಗೆ ಸೋಂಕು
ಇನ್ನು, ರಸ್ತೆಯಲ್ಲಿನ ಒಂದು ಗುಂಡಿ ತಪ್ಪಿಸಲು ಹೋಗಿ ಇನ್ನೂಂದು ಗುಂಡಿಯಲ್ಲಿ ಕಾರು, ಬೈಕ್ ಇಳಿಸಬೇಕಾಗಿದೆ. ಇಂತಹ ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟ ಅಂತಾರೆ ಸ್ಥಳೀಯರಾದ ಜಗನ್ನಾಥ್ ಅವರು. ಮಳೆಗಾಲದ ಬಳಿಕ ರಸ್ತೆ ಗುಂಡಿ ಮುಚ್ಚಿಸಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ.