ಶಿವಮೊಗ್ಗ : ರಾಜ್ಯ ಕಾನೂನು ಸುವ್ಯವಸ್ಥೆಯ ನೂತನ ಎಡಿಜಿಪಿ ಆರ್. ಹಿತೇಂದ್ರ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದು, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಡಿಎಆರ್ ಸಭಾಂಗಣದಲ್ಲಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಸುದೀರ್ಘ ಎರಡು ತಾಸು ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ನೌಕರರ ವರ್ಗಾವಣೆ ಆರಂಭವಾಗಿದೆ. ಹೀಗಾಗಿ ಜಿಲ್ಲೆಯ ಪೊಲೀಸರು ವರ್ಗಾವಣೆಯಾಗುವ ತನಕ ಉತ್ತಮವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದೇನೆ. ಬೆಳಗಾವಿ, ಮಂಗಳೂರು, ಗುಲ್ಬರ್ಗ ಜಿಲ್ಲೆಗಳಿಗೆ ಭೇಟಿ ನೀಡಿದಂತೆ ಶಿವಮೊಗ್ಗಕ್ಕೂ ಭೇಟಿ ನೀಡಿ ಜಿಲ್ಲೆಯ ಎಲ್ಲ ಪೊಲೀಸರ ಜೊತೆ ಸಭೆ ನಡೆಸಿದ್ದೇನೆ" ಎಂದು ಹೇಳಿದರು.
"ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದ್ದೇನೆ. ಮುಂಬರುವ ಬಕ್ರೀದ್, ಗಣೇಶ ಹಬ್ಬಗಳು ಹಾಗೂ ಜಿಲ್ಲಾ, ತಾಲೂಕು ಪಂಚಾಯತ್ ಹಾಗು ಲೋಕಸಭಾ ಚುನಾವಣೆಗಳ ಕುರಿತು ಸೂಚನೆಗಳನ್ನು ಕೊಟ್ಟಿದ್ದೇನೆ. ಈಗಾಗಲೇ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬಂದಾಗ ಉತ್ತಮ ಭದ್ರತಾ ವ್ಯವಸ್ಥೆಯನ್ನು ಪೊಲೀಸರು ಕೊಟ್ಟಿದ್ದಾರೆ. ಚುನಾವಣೆಯನ್ನು ಒಳ್ಳೆಯ ರೀತಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಆಗುವಂತೆ ನೋಡಿಕೊಂಡು ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
"ರಾಜ್ಯದ ಎಲ್ಲ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ಸ್ಪೆಕ್ಟರ್‌ಗಳಿಗೆ ಉತ್ತಮವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಇನ್ಸ್ಪೆಕ್ಟರ್‌ಗಳು, ಸರ್ಕಲ್ ಇನ್ಸ್ಪೆಕ್ಟರ್ ಗಳಂತೆ ಕಾರ್ಯ ನಿರ್ವಹಿಸದೇ ಕಮಿಷನರೇಟ್‌ನಂತೆ ಕೆಲಸ ಮಾಡಬೇಕೆಂದು ಹೇಳಿದ್ದೇನೆ. ನಾನು ಭೇಟಿ ಕೊಟ್ಟ ಎಲ್ಲ ಜಿಲ್ಲೆಯಲ್ಲಿ ಬೇರೆ ಬೇರೆ ರೀತಿಯ ಪರಿಸ್ಥಿತಿ ಇದೆ. ಸದ್ಯ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದು ಇಲ್ಲಿನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ತೃಪ್ತಿ ತಂದಿದೆ" ಎಂದರು. ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಹಾಗೂ ಪಿಐಗಳು ಹಾಜರಿದ್ದರು.
ಮನೆಯಲ್ಲೇ ಗಾಂಜಾ ಬೆಳೆದ ವಿದ್ಯಾರ್ಥಿಗಳು ಸೆರೆ : ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿಯೇ ಗಾಂಜಾ ಬೆಳೆದ ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂಡಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಜೂನ್ 25ರ ಭಾನುವಾರ ಬಂಧಿಸಿದ್ದರು. ತಮಿಳುನಾಡು ರಾಜ್ಯದ ವಿಘ್ನರಾಜ್ (28), ಪಾಂಡಿದೊರೈ (27) ಹಾಗೂ ಕೇರಳ ರಾಜ್ಯದ ವಿನೋದ್ ಕುಮಾರ್ (27) ಬಂಧಿತರು. ವಿದ್ಯಾರ್ಥಿಗಳು ತಾವು ಬಾಡಿಗೆ ಪಡೆದ ಮನೆಯಲ್ಲಿ ಪಾಲಿ ಹೌಸ್ ರೀತಿಯಲ್ಲಿ ಕೃತಕವಾಗಿ ಗಾಂಜಾ ಬೆಳೆಯುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 227 ಗ್ರಾಂ ಒಣ ಗಾಂಜಾ, 1.530 ಕೆ.ಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳು, 3 ಕೆನಾಬಿಸ್ ಆಯಿಲ್ ಸಿರೀಂಜ್ ರೀತಿಯ ವಸ್ತುಗಳು, 3 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಟಾಂಡ್ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 1 ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಬಬಕಲೈಸರ್ , 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕ್ಯಾಪ್ಗಳು, ಗಾಂಜಾ ಗಿಡದ ಕಾಂಡಗಳು, 19 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ತಿಳಿಸಿದ್ದರು.
ಇದನ್ನೂ ಓದಿ : ಶಿವಮೊಗ್ಗ: ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲೇ ಗಾಂಜಾ ಬೆಳೆದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ