ಶಿವಮೊಗ್ಗ: ಜಿಲ್ಲೆಯಾದ್ಯಂತ ಸಂಭ್ರಮದ ಜೊತೆಗೆ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಬೆಳಗಿನ ಜಾವದಿಂದಲೇ ಭಕ್ತರು ನಾಗ ಬನದ ಬಳಿ ತೆರಳಿ ನಾಗ ದೇವನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಅರಳಿಕಟ್ಟೆಯಲ್ಲಿನ ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನಾಗ ದೇವನ ಬಳಿ ಬರುವ ಭಕ್ತರು, ನಾಗ ದೇವನ ಮೂರ್ತಿಯನ್ನು ಸ್ವಚ್ಚಗೊಳಿಸಿ, ಅರಿಶಿನ ಕುಂಕುಮವನ್ನು ಹಚ್ಚಿ, ಹತ್ತಿ ಹಾರವನ್ನು ಹಾಕಿ, ಹೂವುಗಳಿಂದ ಅಲಂಕರಿಸುತ್ತಾರೆ. ಬಳಿಕ ನಾಗಪ್ಪನ ಮುಂದೆ ವಿವಿಧ ಹಣ್ಣುಗಳು, ಎಳ್ಳುಂಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯವನ್ನು ಸಲ್ಲಿಸುತ್ತಾರೆ. ನಂತರ ನಾಗಪ್ಪನಿಗೆ ಹಾಲನ್ನು ಸಮರ್ಪಿಸುತ್ತಾರೆ.
ನಾಗನಿಗೆ ಭಕ್ತರಿಂದ ಪೂಜೆ: ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಾಲಯದ ಮುಂಭಾಗದ ನಾಗರಕಟ್ಟೆಗೆ ಬೆಳ್ಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ನಾಗ ದೇವನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನಾಗರ ಪಂಚಮಿ ಪ್ರಯುಕ್ತ ಭಕ್ತರು ಆಗಮಿಸಿ, ನಾಗ ದೇವನಿಗೆ ಹಾಲೆರೆದು ಪಂಚಾಮೃತ ಅಭಿಷೇಕ, ಎಳ್ಳುಂಡೆ, ನೈವೇದ್ಯ ಪ್ರಸಾದ ಅರ್ಪಿಸುತ್ತಿದ್ದಾರೆ.
ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ: ವಿಡಿಯೋ
ಈ ವೇಳೆ ನಾಗರ ಪಂಚಮಿಯ ವಿಶೇಷತೆಯ ಕುರಿತು ಮಾತನಾಡಿದ ಅರ್ಚಕರಾದ ಸೂರ್ಯ ನಾರಾಯಣ, "ನಾಗ ದೇವನ ಪೂಜೆ ಎಲ್ಲರಿಗೂ ಮುಖ್ಯವಾಗಿದೆ. ನಾವು ಪ್ರಾರ್ಥಿಸಿದರೆ ನಾಗ ದೇವರು ಖಂಡಿತ ಫಲ ನೀಡುತ್ತಾರೆ. ಸರ್ಪಸಂಬಂಧ ದೋಷಗಳಿದ್ದರೆ, ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದರೆ ಅಥವಾ ಇನ್ಯಾವುದೇ ಸಮಸ್ಯೆಗಳು ಆಗಿದ್ದಲ್ಲಿ ಅದನ್ನು ನಾಗ ದೇವರು ಸರಿ ಮಾಡುತ್ತಾರೆ. ಇಡೀ ಭೂಮಿಯನ್ನೇ ನಾಗದೇವರು ಹೊತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಇಲ್ಲಿ ಬರುವ ಭಕ್ತರಿಗೆ ನಾಗ ದೇವರಿಗೆ ಪೂಜೆ ಸಲ್ಲಿಸುವ ಅವಕಾಶ ಇದೆ" ಎಂದು ತಿಳಿಸಿದರು.
ಭಕ್ತರು ಹೇಳಿದ್ದೇನು?: "ಈ ನಾಗರ ಪಂಚಮಿ ಹಬ್ಬವನ್ನು ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ಹೆಣ್ಣು ಮಕ್ಕಳು ತವರು ಮನೆಯವರು ಚೆನ್ನಾಗಿರಲಿ ಎಂದು ಹಾರೈಸಲು ನಾಗ ದೇವನಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯಿಂದ ಪೂಜೆಗೆ ಬೇಕಾದ ಎಲ್ಲಾ ಪೂಜಾ ಸಾಮಗ್ರಿಗಳನ್ನು ತಂದು ನಾಗ ದೇವನಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ದೇವನಿಗೆ ಹಾಲು ಎರೆದು ಪೂಜೆ ಸಲ್ಲಿಸುತ್ತಾರೆ" ಎಂದು ಭಕ್ತರಾದ ಲಲಿತಮ್ಮನವರು ಹೇಳಿದರು.
ಬಳಿಕ ಮತ್ತೊಬ್ಬ ಭಕ್ತರಾದ ಸುರೇಖಾರವರು ಮಾತನಾಡಿ, "ಉತ್ತರ ಕನ್ನಡದವರು ನಾಗನ ಆರಾಧನೆಯನ್ನು ಬಹಳ ಶ್ರದ್ದಾ ಭಕ್ತಿಯಿಂದ ಮಾಡುತ್ತಾರೆ. ನಾಗ ದೇವನ ಕಲ್ಲನ್ನು ಮುಟ್ಟದೆ, ಅರ್ಚಕರಿಂದ ಪೂಜೆ ಸಲ್ಲಿಸುತ್ತಾರೆ. ಹಾಲಿನ ಅಭಿಷೇಕ ನಡೆಸಿ ಪೂಜೆ ಮಾಡಲಾಗುತ್ತದೆ. ನಂತರ ಮನೆಗೆ ತೆರಳಿ ಬಾಗಿಲು ಪೂಜೆ ಮಾಡುತ್ತೇವೆ. ಸಂಜೆ ಅರಶಿನ ಎಲೆಯಲ್ಲಿ ಕಡಬು ಮಾಡಿಕೊಂಡು ತಿನ್ನುವುದು ಈ ದಿನದ ವಿಶೇಷತೆ" ಎಂದರು.
ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ ನಾಗರ ಪಂಚಮಿ ಸಂಭ್ರಮ: ನಾಗದೇವರಿಗೆ ಹಾಲು, ಎಳನೀರಿನ ಅಭಿಷೇಕ