ಶಿವಮೊಗ್ಗ: ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ವಿಚಾರದಲ್ಲಿ ನಿರುದ್ಯೋಗಿಗಳಿಗೆ ಭ್ರಮನಿರಸನಗೊಳಿಸಿದ್ದಾರೆ ಎಂದು ಸಂಸದ ಬಿ ವೈ ರಾಘವೇಂದ್ರ ಟೀಕಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಯುವಕ - ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ಗ್ಯಾರಂಟಿ ಅಲೆಯ ಮೇಲೆ ಗೆದ್ದು ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿ ಜಾರಿಗೆ ಅನೇಕ ಮಾನದಂಡಗಳನ್ನು ಹಾಕಿದೆ. ಘೋಷಣೆ ಮಾಡಿದ ಅನಿವಾರ್ಯತೆಗೆ ಗ್ಯಾರಂಟಿ ಜಾರಿ ಮಾಡುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗಿಗಳಿಗೆ ಈ ಯೋಜನೆ ತಲುಪುವ ನಮ್ಮ ಯೋಚನೆಯನ್ನು ರಾಜ್ಯ ಸರ್ಕಾರ ಸುಳ್ಳಾಗಿಸಿದೆ ಎಂದರು.
2023 ಏಪ್ರಿಲ್ ನಂತರ ಪಾಸಾಗಿರಬೇಕು, ಹೀಗೆ ಅನೇಕ ಕಂಡೀಷನ್ ಹಾಕಿದ್ದಾರೆ. ಏಪ್ರಿಲ್ನ ನಾಲ್ಕೈದು ತಿಂಗಳ ನಂತರ ಫಲಿತಾಂಶ ಪ್ರಕಟವಾಗಿರುವ ಕಾರಣಕ್ಕೆ ಅಂತಹವರಿಗೆ ಈ ಯೋಜನೆ ಲಭ್ಯವಾಗಲ್ಲ. ನಮ್ಮ ಜಿಲ್ಲೆಯಲ್ಲಿ 3,500 ಸಾವಿರ ಯುವಕರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನಿರುದ್ಯೋಗಿ ಯುವಕರಿಂದ ಮತ ಪಡೆದ ರಾಜ್ಯ ಸರ್ಕಾರ ಈಗ ಕಂಡೀಷನ್ ಹಾಕಿದೆ. ಅದರಲ್ಲೂ ಎಪಿಎಲ್ - ಬಿಪಿಎಲ್ ಎಂದು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದರು.
ನಿರುದ್ಯೋಗಿಗಳಿಂದ ಮತ ಪಡೆದು, ಅವರಿಗೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ. ಲೋಕಸಭಾ ಚುನಾವಣೆ ಮುಂದಿಟ್ಟು ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ ನೀಡಿ ಮರುಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಕಂಡೀಷನ್ ಹಾಕಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಕೆಲಸ ಮಾಡುತ್ತಿದೆ. ಲೋಕಸಭೆ ಚುನಾವಣೆಯ ನಂತರ ಈ ಗ್ಯಾರಂಟಿ ಮುಂದುವರೆಸುತ್ತಾರೆ ಎಂಬುದು ಗೂತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ 1.45 ಕೋಟಿ ಹೆಣ್ಣು ಮಕ್ಕಳು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಇದರಲ್ಲಿ 49 ಕೋಟಿ ಆರ್ಥಿಕ ಹೊರೆಯಾಗಿದೆ. ಆದರೆ ಸರ್ಕಾರ ಅದು ಹೇಗೆ ಅಂಕಿ ಅಂಶ ನೀಡುತ್ತದೆಯೂ ಗೂತ್ತಿಲ್ಲ ಎಂದರು.
ಫ್ರೀಡಂ ಪಾರ್ಕ್ ಜಾಗ ಮಂಜೂರು ಮಾಡಿದ್ದು ಯಡಿಯೂರಪ್ಪ: ಯಡಿಯೂರಪ್ಪನವರು ಹಿಂದೆ ಸಿಎಂ ಆಗಿದ್ದಾಗ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೇಕೆಂದು ಹಳೇ ಜೈಲನ್ನು ಸ್ಥಳಾಂತರ ಮಾಡಿಸಿದ್ದರು. ಆದರೆ ಸಿಎಂಗೆ ಮಾಹಿತಿ ಕೊರತೆಯಿಂದ ನಿನ್ನೆ ನಾನು ಹಳೇ ಜೈಲನ್ನು ಸ್ಥಳಾಂತರ ಮಾಡಿಸಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಭಯ ಕಾಂಗ್ರೆಸ್ಗೆ ಕಾಡುತ್ತಿದೆ: ಬಿಎಸ್ವೈ