ಶಿವಮೊಗ್ಗ: ಲಾಕ್ಡೌನ್ನಿಂದ ಮಕ್ಕಳು ಶಾಲೆಗಳಿಗೆ ಹಾಗೂ ಯುವಕರು ಕಾಲೇಜುಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿಯೇ ಇರುವ ಮಕ್ಕಳನ್ನು ಸಂತೈಸುವ ಸಲುವಾಗಿ ಮಕ್ಕಳು ಮನೆಯಿಂದ ಹೊರಗೆ ಹೋಗದಂತೆ ಮಾಡಲು ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡೋದು ಸರ್ವೇ ಸಾಮಾನ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ಕೈಗೆ ಮೊಬೈಲ್ ನೀಡುವುದು ಅವರ ಮನಸ್ಸಿನ ಮೇಲೆ ಹಾಗೂ ಆರೋಗ್ಯಕರ ಬೆಳವಣಿಗೆಯ ಮೇಲೆ ಗಂಭೀರವಾದ ಪರಿಣಾಮ ಉಂಟು ಮಾಡುತ್ತದೆ. ಮೊದ ಮೊದಲಿಗೆ ಕಿಡ್ಸ್ ಅನಿಮೇಷನ್ ನೋಡಲು ಆರಂಭಿಸುವ ಮಕ್ಕಳು ಮುಂದೊಂದು ದಿನ ಮೊಬೈಲ್ ವ್ಯಸನಕ್ಕೆ ಜೋತು ಬೀಳುತ್ತಾರೆ. ಪೋಷಕರು ಮೊಬೈಲ್ ನೀಡದೇ ಹೋದರೆ, ಊಟ ಬಿಡುವುದು, ಹಠ ಮಾಡುವುದರ ಜೊತೆಗೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಸ್ಥಿತಿಗೆ ತಲುಪಿ ಬಿಡುತ್ತಾರೆ.
ಮೊಬೈಲ್ ಬಳಕೆ ಒಂದು ರೀತಿ ಮಾದಕ ವ್ಯಸನಕ್ಕಿಂತಲೂ ಹೆಚ್ಚು ಅಪಾಯಕಾರಿ ಎನ್ನುತ್ತವೆ ಸಂಶೋಧನೆಗಳು. ನಮ್ಮ ಮೆದುಳಿನಲ್ಲಿ ಡೆಪೊಮಿನ್ ಎಂಬ ನರ ಸಂವಾಹಕವಿದ್ದು, ಅದು ನಮ್ಮಲ್ಲಿ ಉತ್ಪತ್ತಿಯಾದ್ರೆ ನಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ. ಮಕ್ಕಳು ಮೊಬೈಲ್ ಬಳಕೆ ಮಾಡಿದಾಗ ಅವರಿಗೆ ಡೆಪೊಮಿನ್ ಉತ್ಪತ್ತಿಯಾಗಿ ಖುಷಿ ನೀಡುತ್ತದೆ. ಇದನ್ನೇ ಮಕ್ಕಳ ಮನಸ್ಸು ಆಗಾಗ ಬೇಕೆಂದು ಬಯಸುತ್ತದೆ. ಇದೇ ವ್ಯಸನವಾಗಿ ಪರಿವರ್ತನೆಯಾಗುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರಾದ ಪ್ರಮೋದ್ ಸದ್ಯಕ್ಕೆ ಕೆಲವು ವಿದ್ಯಾಸಂಸ್ಥೆಗಳು ಆನ್ಲೈನ್ ಪಾಠ ಹೇಳಿಕೊಡುವುದನ್ನು ರೂಢಿಸಿಕೊಳ್ಳುತ್ತಿವೆ. ಮಕ್ಕಳ ಕೈಲಿ ಮೊಬೈಲ್ ನೀಡೋದು ಅನಿವಾರ್ಯ ಎಂಬ ಪರಿಸ್ಥಿತಿಗೆ ಪೋಷಕರು ತಲುಪಿದ್ದಾರೆ.
ಆದರೆ, ಅವರು ಮೊಬೈಲ್ ಅಥವಾ ಲ್ಯಾಪ್ಟಾಪ್ ಅನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಪೋಷಕರು ನಿಗಾವಹಿಸಬೇಕಿದೆ ಎಂದು ಮಾನಸಿಕ ತಜ್ಞರಾದ ಡಾ.ಪ್ರೀತಿ ಅಭಿಪ್ರಾಯ ಪಡುತ್ತಾರೆ.