ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ವಸತಿ ರಹಿತರಿಗೆ ನಿರ್ಮಾಣ ಮಾಡುವ ಜಿ+ 2 ಮಾದರಿ ಮನೆ ನಿರ್ಮಾಣಕ್ಕೆ ಶಾಸಕ ಕೆ ಎಸ್ ಈಶ್ವರಪ್ಪನವರು ಇಂದು ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು.
ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಕಳೆದ ಏಳೆಂಟು ವರ್ಷಗಳಿಂದ ಮಾಡಿದ ಪ್ರಯತ್ನಕ್ಕೆ ಇವತ್ತು ಫಲ ಸಿಕ್ಕಿದೆ. ನಗರದ ಹೊರವಲಯದ ಗೋವಿಂದರಾಜಪುರ ಗ್ರಾಮದಲ್ಲಿ ಸದ್ಯ 24 ಮನೆಗಳ ಸಮುಚ್ಚಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಮಾದರಿ 24 ಮನೆಗಳ ಮನೆ ನಿರ್ಮಾಣ ಮಾಡಲಿದ್ದೇವೆ ಎಂದರು.
ಒಂದು ಮನೆ ನಿರ್ಮಾಣಕ್ಕೆ 5.85 ಲಕ್ಷ ರೂ. ಬೇಕಾಗುತ್ತದೆ. ಒಂದು ಮನೆ 300 ಚದರ ಅಡಿ ನಿರ್ಮಾಣವಾಗಲಿದ್ದು, ಈಗಾಗಲೇ ಮನೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದೇ ರೀತಿ ಸಿದ್ಲಿಪುರ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶದ ಬಳಿಯ ಕಾರ್ಖಾನೆ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗುವುದು. ಇದಕ್ಕಾಗಿ ಅಗಸ್ಟ್ 15 ರಿಂದ ಅರ್ಜಿ ಕರೆಯಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಕೆ ಎ ದಯಾನಂದ್, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಸೇರಿದಂತೆ ಪಾಲಿಕೆಯ ಸದಸ್ಯರು ಹಾಜರಿದ್ದರು.