ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಕಬಡ್ಡಿ ಕೂಟದ ಗಲಾಟೆ ಸಂಬಂಧ ಶಾಸಕ ಸಂಗಮೇಶ್ ಪುತ್ರನನ್ನು ಬಂಧಿಸಿರುವ ಪ್ರಕರಣವನ್ನು ಖಂಡಿಸಿ ಶಿವಮೊಗ್ಗದಲ್ಲಿಂದು ಕಾಂಗ್ರೆಸ್ನಿಂದ ನಡೆಯುತ್ತಿರುವ ಜನಾಕ್ರೋಶ ಸಮಾವೇಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುವ ಸಮಾವೇಶಕ್ಕೆ ಬರುವ ದೊಡ್ಡ ದೊಡ್ಡ ನಾಯಕರ ಪಟ್ಟಿಯನ್ನು ನಾನು ನೋಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರುಗಳು ಆಗಮಿಸುತ್ತಿದ್ದು, ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ನಾಯಕರು ಶಿವಮೊಗ್ಗಕ್ಕೆ ಬರುವ ಮೊದಲು ಒಮ್ಮೆ ಭದ್ರಾವತಿಗೆ ಹೋಗಿ ನೋಡಿಕೊಂಡು ಬರಲಿ. ಘಟನೆಯಲ್ಲಿ ಯಾರ ತಪ್ಪೆಂದು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಕೇಳಲಿ. ಕ್ರೀಡೆಯಲ್ಲಿ ಗೆದ್ದ ತಂಡ ಭಾರತ ಮಾತಾಕೀ ಜೈ, ಜೈ ಶ್ರೀರಾಮ್ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಈ ತರಹ ಕೂಗಿದ್ದು ಶಾಸಕ ಸಂಗಮೇಶ್ ಹಾಗೂ ಅವರ ಮಕ್ಕಳಿಗೆ ಯಾಕೆ ಬೇಸರ ಆಗಿದೆಯೋ ಗೊತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಎಂದು ಕೂಗಿದ್ದರೆ ಸಮಾಧಾನ ಆಗ್ತಿತ್ತೇನೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯವನ್ನು ಕಾಂಗ್ರೆಸ್ನವರು ಕ್ರೀಡಾ ಮನೋಭಾವದಿಂದ ನೋಡಬೇಕಿದೆ. ಅದನ್ನು ಬಿಟ್ಟು ಇಲ್ಲಿ ರಾಜಕೀಯ ಮಾಡಬಾರದು ಎಂದರು.
ಕಾಂಗ್ರೆಸ್ ಅಧೋಗತಿ ಗ್ಯಾರಂಟಿ:
ಜನಾಕ್ರೋಶ ಸಮಾವೇಶ ಮಾಡುತ್ತಿರುವುದಕ್ಕೆ ಅರ್ಥವಿಲ್ಲ. ಶಿವಮೊಗ್ಗ ಮತ್ತು ಭದ್ರಾವತಿ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಇದೇ ರೀತಿ ಕಾಂಗ್ರೆಸ್ನವರು ಮುಂದುವರೆಸಿಕೊಂಡು ಹೋದರೆ ಅಧೋಗತಿಗೆ ಹೋಗುವುದು ಖಂಡಿತ. ಸಿಎಂ ಅಥವಾ ನಾನು, ಸಂಸದರು ತಪ್ಪು ಮಾಡಿದರೆ ಟೀಕೆ ಮಾಡಲಿ, ಹೋರಾಟ ಮಾಡಲಿ ನಾನು ಇದನ್ನು ಒಪ್ಪುತ್ತೇನೆ ಎಂದರು.
ಓದಿ: ಎಸ್ಐಟಿಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ: ಸಚಿವ ಬೊಮ್ಮಾಯಿ
ಎಸ್ಐಟಿ ಮೂಲಕ ತನಿಖೆ ಆಗಬೇಕು ಎಂದು ರಮೇಶ್ ಜಾರಕಿಹೊಳಿ ಅಪೇಕ್ಷೆ ಪಟ್ಟಿದ್ದರು. ಅದರಂತೆ ಎಸ್ಐಟಿ ರಚನೆ ಮಾಡಲಾಗಿದೆ. ಅವರು ತನಿಖೆ ಪ್ರಾರಂಭಿಸಿದ್ದು, ಅದಷ್ಟು ಬೇಗ ಸತ್ಯಾಂಶ ಹೊರ ಬೀಳಲಿದೆ ಎಂದರು.
ಸಿಟಿ ರೌಂಡ್ಸ್ ಹಾಕಿದ ಸಚಿವರು:
ಇಂದು ಸಚಿವರು ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರವಾಣಿ ಬಡಾವಣೆಯ ನಿವಾಸಿಗಳ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಸ್ಥಳೀಯರು ನೀವು ನಮ್ಮ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿದ್ದೀರಿ, ಹೀಗಾಗಿ ಈ ಬಡಾವಣೆಗೆ ಶಿವನಗರ ಎಂದು ನಾಮಕರಣ ಮಾಡುತ್ತೇವೆ ಎಂದರು. ಇದಕ್ಕೆ ಸಚಿವರು ನನ್ನ ಹೆಸರು ಇಡಬೇಡಿ, ನಾನು ಬದುಕಿರುವ ವೇಳೆಯೇ ಇದೆಲ್ಲ ಬೇಡ ಎಂದರು.
ಮೇಯರ್ ಸುನೀತ ಅಣ್ಣಪ್ಪ, ಕಾರ್ಪೊರೇಟರ್ ಆಶಾ ಚಂದ್ರಪ್ಪ, ಆಯುಕ್ತ ಚಿದಾನಂದ ವಾಟರೆ, ನೀರು ಸರಬರಾಜು ಮಂಡಳಿಯ ರಮೇಶ್ ಮುಂತಾದವರು ಇದ್ದರು.