ಶಿವಮೊಗ್ಗ: ಔಷಧ ಮಾರಾಟಗಾರರ ಸಂಘದಿಂದ ಕಿರುಕುಳ ನಿವಾರಿಸಬೇಕೆಂದು ಒತ್ತಾಯಿಸಿ ಜನೌಷಧ ಕೇಂದ್ರಗಳ ಮಾಲೀಕರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭಾರತೀಯ ಜನೌಷಧಿ ಯೋಜನೆ ಅಭಿಯಾನದ ಅನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ 25 ಮಂದಿ ವಿವಿಧೆಡೆ ಜನೌಷಧಿ ಕೇಂದ್ರಗಳನ್ನು ಆರಂಭಿಸಿ ಶೇ 80 ರಷ್ಟು ರಿಯಾಯಿತಿ ದರದಲ್ಲಿ ಜನರಿಗೆ ಗುಣಮಟ್ಟದ ಔಷಧಿ ವಿತರಿಸುತ್ತಿದ್ದೇವೆ. ಜೀವನಾವಶ್ಯಕ ಔಷಧಗಳು ಸಕಾಲಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸರಬರಾಜು ಆಗುತ್ತಿಲ್ಲ. ಗ್ರಾಹಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನರಿಕ್ ಔಷಧಿಗಳನ್ನು ತರಿಸಿ ಜನೌಷಧಿ ದರದಲ್ಲಿ ಶೇ 60 ರಿಂದ 80 ರಷ್ಟು ರಿಯಾಯಿತಿ ನೀಡಿ ವಿತರಿಸುವ ಮೂಲಕ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ಆದರೆ ಔಷಧಿ ಮಾರಾಟಗಾರರ ಸಂಘದವರು ಜನರಿಕ್ ಔಷಧ ಮಾರದಂತೆ ತಾಕೀತು ಮಾಡುವುದು, ನೋಟಿಸ್ ನೀಡುವುದು ಕೆಲವು ಜನ ಔಷಧಿ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಮುಂದಾಗಿದ್ದಲ್ಲದೇ ಧಮಕಿ ಹಾಕುವುದನ್ನು ಮಾಡುತ್ತಿದ್ದಾರೆ ಎಂದು ಜನೌಷಧ ಕೇಂದ್ರಗಳ ಮಾಲೀಕರ ಸಂಘದವರು ಆರೋಪಿಸಿದರು.
ನಾವು ವಿತರಿಸುವ ಜನರಿಕ್ ಔಷಧ ಕಳಪೆಯಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.