ಶಿವಮೊಗ್ಗ: ಕಾಲೇಜು ಹಾಸ್ಟೆಲ್ನ ತನ್ನ ಕೊಠಡಿಯಲ್ಲೇ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜು ಹಾಸ್ಟೆಲ್ನಲ್ಲಿ ನಡೆದಿದೆ.
ಭದ್ರಾವತಿ ಮೂಲದ ವೆಂಕಟೇಶ್ ಎಂಬುವರ ಪುತ್ರಿ ಲಲಿತಾ ಆತ್ಮಹತ್ಯೆ ಮಾಡಿಕೊಂಡ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ತನಗಿರುವ ಸಮಸ್ಯೆಯ ಬಗ್ಗೆ ಆಕೆ ತನ್ನ ಸ್ನೇಹಿತರ ಬಳಿಯೂ ಹೇಳಿಕೊಂಡಿರಲಿಲ್ಲ. ಜೊತೆಗೆ ಪಾಲಕರ ಜೊತೆಯೂ ಹಂಚಿಕೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಜಾಗದಲ್ಲಿ ಡೆತ್ನೋಟ್ ಸಹ ಪತ್ತೆಯಾಗಿಲ್ಲ. ಈ ಹಿಂದೆಯೂ ಒಂದು ಬಾರಿ ಲಲಿತಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.
ಹಾಸ್ಟೆಲ್ನ ರೂಮಿನಲ್ಲಿ ಒಬ್ಬಳೇ ಇದ್ದ ಲಲಿತಾ ನಿನ್ನೆ ರಾತ್ರಿ ಊಟ ಮುಗಿಸಿ ತನ್ನ ಕೋಣೆ ಸೇರಿಕೊಂಡಿದ್ದಳು. ಇಂದು ಬೆಳಗ್ಗೆ 10 ಗಂಟೆಯಾದರೂ ರೂಮಿನ ಬಾಗಿಲು ತೆಗೆಯದಿದ್ದಾಗ ಆಕೆಯ ಸ್ನೇಹಿತೆ ಬಾಗಿಲು ಬಡಿದಿದ್ದಾಳೆ. ಎಷ್ಟೇ ಬಾಗಿಲು ಬಡಿದರೂ ಲಲಿತಾ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಆಕೆ ವಿಷಯವನ್ನು ಹಾಸ್ಟೆಲ್ನ ಸೆಕ್ಯುರಿಟಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ: ಆಸ್ತಿ ವಿವಾದ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಸೆಕ್ಯುರಿಟಿ ಗಾರ್ಡ್ ರೂಮಿನ ಮೇಲ್ಭಾಗದಲ್ಲಿರುವ ಗಾಜಿನ ಕಿಟಕಿ ಸರಿಸಿ ನೋಡಿದಾಗ ಲಲಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಹಾಸ್ಟೆಲ್ ಗೆ ಬಂದ ಲಲಿತಾ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಎಂಬಿಬಿಎಸ್ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೋಲಿಸರು ತನಿಖೆ ಆರಂಭಿಸಿದ್ದಾರೆ.