ಶಿವಮೊಗ್ಗ: ಕೊರೊನಾದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರು ಬೆಳೆದ ಮೆಕ್ಕೆಜೋಳವನ್ನು ಕೆಎಂಎಫ್ ಸಹಯೋಗದಲ್ಲಿ ಪಶು ಆಹಾರ ತಯಾರಿಕಾ ಘಟಕದ ಮೂಲಕ ಖರೀರಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕು ಹಾಗೂ ಅವರಲ್ಲಿರುವ ಮೆಕ್ಕೆಜೋಳವನ್ನು ಖರೀದಿ ಮಾಡುವ ಸಲುವಾಗಿ ಸರ್ಕಾರವು ರಾಜ್ಯದಲ್ಲಿರುವ 2 ಲಕ್ಷದ 75 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡಲು ನಿರ್ಧರಿಸಿದೆ.
ಒಬ್ಬ ರೈತರಿಂದ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಮಾತ್ರ ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿರುವ ಪಶು ಆಹಾರ ಘಟಕದಲ್ಲಿ ಖರೀದಿ ಕೇಂದ್ರ ಮಾಡಲಾಗಿದೆ. ಅಲ್ಲಿ ಮೆಕ್ಕೆಜೋಳವನ್ನು ಖರೀದಿ ಮಾಡಲಾಗುತ್ತದೆ. ಪ್ರತಿ ಕ್ವಿಂಟಾಲ್ಗೆ ಸರ್ಕಾರ ₹1750 ದರ ನಿಗದಿ ಮಾಡಿದೆ ಎಂದರು. ರಾಜ್ಯದಲ್ಲಿ 43 ಲಕ್ಷದ 97 ಸಾವಿರ ಮೆಟ್ರಿಕ್ ಟನ್ ಜೋಳವನ್ನು ರೈತರು ಬೆಳೆದಿದ್ದಾರೆ.
ಈಗಾಗಲೇ ರಾಜ್ಯದ ರೈತರು ಮೆಕ್ಕೆಜೋಳವನ್ನು ಮಾರಾಟ ಮಾಡಿದ್ದಾರೆ. ಉಳಿದ ಜೋಳವನ್ನಾದರೂ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಲಾಗುತ್ತಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಖರೀದಿ ಮಾಡಲಾಗುತ್ತಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್ ಸಿದ್ದಪಡಿಸಲಾಗಿದೆ. ಈ ಮೂಲಕ ರೈತರ ಬೆಳೆಯನ್ನ ಎಷ್ಟು ಜಮೀನಿನಲ್ಲಿ ಬೆಳೆ ಬೆಳೆಯಲಾಗಿದೆ. ಯಾವ ಬೆಳೆ ಎಂದು ನೋಡಿ ಖರೀದಿ ಮಾಡಲಾಗುವುದು ಎಂದರು.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡಾ ಗ್ರಾಮದ ಪಶು ಆಹಾರ ಘಟಕದಲ್ಲಿ ನಾಡಿದ್ದು ಬುಧವಾರದಿಂದ ಖರೀದಿ ಮಾಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.