ಶಿವಮೊಗ್ಗ: ರಾಜ್ಯ ಬಿಜೆಪಿಗರು ಈಗ ಯಾವುದೇ ಕೆಲಸ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಜನವರಿ 12 ರಂದು ಯುವನಿಧಿ ಕಾರ್ಯಕ್ರಮ ನಡೆಸಲು ಉದ್ದೇಶಿದ್ದು, ಈ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ಗೆ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಎಂ ಸಿ ಸುಧಾಕರ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಬಿಜೆಪಿಯವರಿಗೆ ಕೆಲಸ ಇಲ್ಲದೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಲೇ ಅವರು ಈಗ 67 ಸೀಟ್ಗೆ ಬಂದಿದ್ದಾರೆ. ಹೀಗೆ ಆದರೆ 27ಕ್ಕೆ ಬರುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಮುಂದುವರೆದು ಮಾತನಾಡಿ, ಯುವನಿಧಿ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ನಡೆಸಬೇಕೆಂದು ಸಿಎಂ ಅವರಲ್ಲಿ ಮನವಿ ಮಾಡಿದ್ದೆ, ನಾನು ಪ್ರಣಾಳಿಕೆ ಉಪಾಧ್ಯಕ್ಷ ಆಗಿದ್ದೆ, ಹಾಗಾಗಿ ಸಿಎಂ ಇದಕ್ಕೆ ಒಪ್ಪಿಕೊಂಡರು ಎಂದರು. ಸಿದ್ದರಾಮಯ್ಯ ಸರ್ಕಾರ ಯುವಕರಿಗೆ ಹಣ ಕೊಡುತ್ತಿದೆ. ಯುವಕರು ಧೈರ್ಯವಾಗಿರಿ, ನಿಮ್ಮ ಪರ ನಾವಿದ್ದೇವೆ. ಯುವನಿಧಿ ಯೋಜನೆಗೆ ಇದುವರೆಗೆ 25 ಸಾವಿರ ಯುವಕರು ನೋಂದಣಿ ಮಾಡಿಸಿದ್ದಾರೆ. ಇನ್ನೂ ಹೆಚ್ಚಿನ ಯುವಕರು ನೋಂದಣಿ ಮಾಡಿಸಿ ಎಂದು ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.
ಬೆಳಗಾವಿಯ ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಮಕ್ಕಳಿಗೆ ತಾರತಮ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಮಕ್ಕಳಿಗೆ ತಾರತಮ್ಯದ ವಿಚಾರವನ್ನು ನಾನು ಮಾಧ್ಯಮದ ಮೂಲಕ ತಿಳಿದುಕೊಂಡೆ. ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಸಚಿವ ಸತೀಶ್ ಜಾರಕಿಹೊಳಿ ಹಾಗು ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ವಿಷಯ ಬಂದಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ವಹಿಸುತ್ತೇವೆ ಎಂದರು. 2024 ಡಿಸೆಂಬರ್ 31ರೊಳಗೆ ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ, ಡೆಸ್ಕ್ ಜಾರಿ ಮಾಡುತ್ತೇವೆ. ಯಾರೂ ಕೂಡಾ ನೆಲದ ಮೇಲೆ ಕುಳಿತುಕೊಳ್ಳಬಾರದು ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ವಾಗ್ದಾಳಿ: ಮತ್ತೊಂದೆಡೆ ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಶಾಸಕ ಪ್ರಸಾದ್ ಅಬ್ಬಯ್ಯ, ಕ್ರಿಮಿನಲ್ಗಳ ಪರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ, ಅದರ ಬಗ್ಗೆ ಗಮನ ಹರಿಸುವುದು ಬಿಟ್ಟು, ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿರುವುದು ಹತಾಷೆಯ ಭಾವನೆ ತೋರಿಸುತ್ತದೆ ಎಂದು ಹರಿಹಾಯ್ದಿದ್ದರು.
ಇದನ್ನೂ ಓದಿ: ಶೀಘ್ರ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಸುರ್ಜೇವಾಲಾ ಒತ್ತಾಯ