ಶಿವಮೊಗ್ಗ : ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ಪುರಸಭೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ಪುರಸಭೆಯ ಎಫ್ಡಿಎ ಚಂದ್ರಕಲಾ ಲೋಕಾಯುಕ್ತ ಬಲೆಗೆ ಬಿದ್ದವರು. ಇಲ್ಲಿನ ಮಂಜುನಾಥ ಶೆಟ್ಟಿ ಎಂಬವರು ತಮ್ಮ ಖಾತೆ ಬದಲಾವಣೆಗಾಗಿ ಪುರಸಭೆಗೆ ಹೋದಾಗ ಸಿಬ್ಬಂದಿ ಖಾತೆ ಬದಲಾವಣೆ ಮಾಡಿಸದೆ ಸತಾಯಿಸಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮಂಜುನಾಥ್ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೊರಬ ಪುರಸಭೆಯಲ್ಲಿ ಚಂದ್ರಕಲಾ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿ ಉಮೇಶ್ ಈಶ್ವರ ನಾಯಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಚಾಮರಾಜನಗರದಲ್ಲಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ : ಇ- ಸ್ವತ್ತು ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ನಗರಸಭೆಯಲ್ಲಿ ನಡೆದಿದೆ. ನಗರಸಭೆಯ ಕಂದಾಯ ನಿರೀಕ್ಷಕ ನಾರಾಯಣ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ.
ಮಾದೇಶ್ ಎಂಬವರಿಗೆ ನಿವೇಶನದ ಇ-ಸ್ವತ್ತು ಮಾಡಿಕೊಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಇಂದು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗಿನ ಲೋಕಾಯುಕ್ತ ದಾಳಿಗಳು..: ಕಳೆದ ಕೆಲವು ದಿನಗಳ ಹಿಂದೆ ಜಮೀನು ಖಾತೆ ಬದಲಾವಣೆ ಮಾಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾ.ಪಂ ಪಿಡಿಒ ಮಹೇಶ್ ಜಿ.ಎನ್ ಆರೋಪಿ ಅಧಿಕಾರಿ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿಯಲ್ಲಿರುವ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿ ತಮ್ಮ ಹೆಸರಿಗೆ ಮಾಡಿಸಲು 2017ರಲ್ಲಿ ಇಲ್ಲಿನ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಖಾತೆ ಬದಲಾವಣೆ ಆಗದೇ ಇದ್ದುದರಿಂದ 2021ರಲ್ಲಿ ಮತ್ತೆ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ, ಶುಲ್ಕ ಸಂದಾಯ ಮಾಡಿದ್ದರು. ಆದರೂ ಖಾತೆ ಬದಲಾವಣೆ ಆಗಿರಲಿಲ್ಲ.
ಈ ಸಂಬಂಧ ಕಳೆದ ಜೂನ್ 20ರಂದು ಈ ವ್ಯಕ್ತಿಯು ಕೌಕ್ರಾಡಿ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್. ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ. ಜೂನ್ 22ರಂದು ದೂರುದಾರರಿಂದ ಪಿಡಿಒ 20 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.
ಇದನ್ನೂ ಓದಿ : Lokayuktha Raid: ಕೆಎಸ್ಡಿಎಲ್ ಪ್ರಧಾನ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ