ಶಿವಮೊಗ್ಗ: ಸ್ಮಶಾನ ಅಭಿವೃದ್ದಿ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಪಡೆಯುವಾಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಎಸ್.ಗೋಪಿನಾಥ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗುತ್ತಿಗೆದಾರ ರವಿಕುಮಾರ್ ಎಂಬವರಿಂದ ಗೋಪಿನಾಥ್ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಕಾಟಿಕೆರೆಯ ಗುತ್ತಿಗೆದಾರ ರವಿಕುಮಾರ್ ಶಿವಮೊಗ್ಗ ತಾಲೂಕು ಬುಕ್ಲಾಪುರ ಗ್ರಾಮ ಹಾಗೂ ರಾಮಿನಕೊಪ್ಪ ಗ್ರಾಮಗಳ ಸ್ಮಶಾನ ನಿರ್ಮಾಣದ ಕಾಮಗಾರಿ ಕೈಗೊಂಡಿದ್ದರು. ಸಶ್ಮಾನ ನಿರ್ಮಾಣಕ್ಕಾಗಿ 20 ಲಕ್ಷ ರೂ ಹಾಗೂ ಬುಕ್ಲಾಪುರ ಗ್ರಾಮದ ಸಶ್ಮಾನಕ್ಕೆ 10 ಲಕ್ಷ ರೂ ಬಿಡುಗಡೆ ಆದೆ. ಈ ಪೈಕಿ ಈವರೆಗೆ 7 ಲಕ್ಷ ರೂ ಬಿಲ್ ಬಂದಿದೆ. ಉಳಿದ 23 ಲಕ್ಷ ರೂ ಹಣವನ್ನು ಸಮಾಜ ಕಲ್ಯಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ವರದಿ ಕೊಟ್ಟ ನಂತರ ಬಾಕಿ ಹಣ ಬಿಡುಗಡೆ ಮಾಡಬೇಕಿತ್ತು.
ವರದಿ ನೀಡಲು ಗೋಪಿನಾಥ್ 15 ಸಾವಿರ ರೂ ಲಂಚಕ್ಕೆ ಬೇಡಿಕೆ ಇದ್ದಾರೆ. ಈ ಕುರಿತು ರವಿಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವ್ ಆದೇಶದ ಮೇರೆಗೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್, ಪಿಐ ಹೆಚ್.ಎಸ್.ಸುರೇಶ್, ಸಿಬ್ಬಂದಿಗಳಾದ ಮಹಂತೇಶ್, ಯೋಗೀಶ್, ಸುರೇಂದ್ರ, ಚನ್ನೇಶ್ ಸೇರಿದಂತೆ ಇತರರು ಇದ್ದರು.
ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ: ಕಳೆದ ತಿಂಗಳು ದಾವಣಗೆರೆಯಲ್ಲಿ ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಹರಿಹರ ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾ.ಪಂ.ಪಿಡಿಒ ರಾಘವೇಂದ್ರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಜಿಲ್ಲೆಯ ಹರಿಹರದ ಬಳಿಯ ಅಮರಾವತಿ ಕಾಲೊನಿಯಲ್ಲಿ ಪಿಡಿಒ ರಾಘವೇಂದ್ರ ನಿವಾಸದಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಶ್ರೀನಿವಾಸ ಟಿವಿ ಎಂಬವರು ಒಂದು ಎಕರೆ ಜಮೀನು ಖರೀದಿಸಿ ಸೈಟ್ ಮಾಡಲು ಯೋಜಿಸಿದ್ದರು. ಅದಕ್ಕಾಗಿ ಭೂ ಪರಿವರ್ತನೆಗೆ ಅನುಮತಿ ನೀಡಲು ಕೋರಿದ್ದರು. ಇದಕ್ಕೆ ಇಒ ರವಿ 1.60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 12 ಆರ್ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ