ಶಿವಮೊಗ್ಗ: ಏಷ್ಯಾದಲ್ಲಿ ಅತಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದಿಸುವ 2ನೇ ವಿದ್ಯುತ್ ಉತ್ಪಾದನಾ ಕೇಂದ್ರ ಶರಾವತಿ ಲಿಂಗನಮಕ್ಕಿ ಜಲಾಶಯ ವಿದ್ಯುದಾಗಾರ ನೀರಿನ ಕೊರತೆಯಿಂದಾಗಿ ಹಂತಹಂತವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಿದೆ. ವರುಣ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ದಿನದಿನಕ್ಕೆ ಕ್ಷೀಣಿಸುತ್ತಿದೆ. ನೀರಿನ ಕೊರತೆಯಿಂದಾಗಿ ಬೇಸಿಗೆ ಬರುವಷ್ಟರಲ್ಲಿ ಜಲಾಶಯದ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಲಿದೆ.
ರಾಜ್ಯದಲ್ಲಿ ಈಗಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಯಾಗಿದ್ದು ರೈತರು, ಜನರು ವಿದ್ಯುತ್ ವ್ಯತ್ಯಯದಿಂದ ಪರಿತಪಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಈಗಾಗಲೇ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದರಿಂದ ಬೇಸಿಗೆಯಲ್ಲಿ ರೈತರು, ಸಾರ್ವಜನಿಕರು ಸಂಕಷ್ಟ ದಿನಗಳನ್ನು ಎದುರಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಬೇಸಿಗೆ ವೇಳೆಗೆ ಡೆಡ್ ಸ್ಟೋರೇಜ್: ಇದೆಲ್ಲದರ ಮಧ್ಯೆ ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ಧಿ ಹೊರಬಿದ್ದಿದೆ. ಲಿಂಗಮನಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಗೆ ಇನ್ನು ಕೇವಲ 140 ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ. ಮಳೆ ಬಾರದೇ ಹೋದರೆ ಬೇಸಿಗೆಯ ಹೊತ್ತಿಗೆ ಜಲಾಶಯದ ನೀರು ಡೆಡ್ ಸ್ಟೋರೇಜ್ ತಲುಪಲಿದೆ.
ಶರಾವತಿ ಕೊಳ್ಳದ 5 ಜಲ ವಿದ್ಯುದಾಗಾರಗಳಿಂದ ರಾಜ್ಯದ ಬೇಡಿಕೆಯ ಶೇ. 25ರಷ್ಟು ವಿದ್ಯುತ್ ಪೂರೈಸಬಹುದು. ಉಷ್ಣವಿದ್ಯುತ್ ಸ್ಥಾವರಗಳು ಕೈಕೊಟ್ಟಾಗಲೆಲ್ಲ ಜಲ ವಿದ್ಯುತ್ ಘಟಕಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸಾಕಷ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಡಿಕೆ ತಕ್ಕಷ್ಟು ವಿದ್ಯುತ್ ಪೂರೈಸಿದ ಹೆಗ್ಗಳಿಕೆ ಶರಾವತಿ ಕೊಳ್ಳದ ನಾಲ್ಕು ವಿದ್ಯುದಾಗಾರಗಳಿಗಿದೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯ ಶೇ. 50ರಷ್ಟು ಮಾತ್ರ ಭರ್ತಿಯಾಗಿದೆ. ಈಗಾಗಲೇ ಮಳೆ ಬರುವ ಅವಧಿ ಮುಗಿಯುತ್ತಾ ಬಂದಿದೆ. ಇದರಿಂದ ಜಲಾಶಯಕ್ಕೆ ನೀರು ಬರುವ ಅನುಮಾನ ಕಾಡುತ್ತಿದೆ.
ಜಲಾಶಯದ ನೀರಿನ ಪ್ರಮಾಣ: ಜಲಾಶಯದಲ್ಲಿ ಬುಧವಾರ 1786.30 ಅಡಿ ನೀರಿದೆ. ಒಳ ಹರಿವು 629 ಕ್ಯೂಸೆಕ್ ಇದೆ. ಹಾಲಿ ವಿದ್ಯುತ್‌ಗೆ 2691.75 ಕ್ಯೂಸೆಕ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಹಾಲಿ ಜಲಾಶಯದಲ್ಲಿ 43.45% ನೀರಿದೆ. ಕಳೆದ ವರ್ಷ ಜಲಾಶಯದಲ್ಲಿ ಇದೇ ವೇಳೆಗೆ 1813.60 ಅಡಿ ನೀರು ಇತ್ತು.
10 ವರ್ಷಗಳಲ್ಲಿ 2013-14, 2014-15, 2019-20ನೇ ಸಾಲಿನಲ್ಲಿ ಜಲಾಶಯ ತುಂಬಿದ್ದು ಬಿಟ್ಟರೆ, 2022ರಲ್ಲಿ, 2021ರಲ್ಲಿ 1810 ಅಡಿ ದಾಟಿತು. ಉಳಿದಂತೆ ಶೇ. 50ರಷ್ಟು ಭರ್ತಿಯಾಗಿದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲೇ ದಟ್ಟ ಮಲೆನಾಡಿನಲ್ಲಿ ಬಿಸಿಲು ಆವರಿಸಿ ಜಲಾಶಯದ ಒಳಹರಿವು ನಿಂತೇ ಹೋಗಿದೆ. ಇದೇ ಸಮಯದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸಹ ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಲೋಡ್ ಕೊಡಲಾಗಿತು. ಇದರಿಂದ ನೀರಿನ ಸಂಗ್ರಹ ಪ್ರಮಾಣ ಗಣನೀಯ ಏರಿಕೆಯಾಗಿಲ್ಲ.
ಮಳೆ ಬಾರದೇ ಹೀಗೇ ಪರಿಸ್ಥಿತಿ ಮುಂದುವರಿದರೆ ಶರಾವತಿ ಹಿನ್ನೀರಿನ ಗ್ರಾಮಸ್ಥರು ನದಿಯಲ್ಲಿ ಸಂಚರಿಸುವುದು ದುಸ್ತರವಾಗಲಿದೆ. ಹಿನ್ನೀರಿನ ಗ್ರಾಮಸ್ಥರಿಗೆ ತಮ್ಮ ತೋಟಗಳಿಗೂ ನೀರು ಸಿಗುವ ಅನುಮಾನವೂ ಕಾಡುತ್ತಿದೆ. ಶರಾವತಿ ಕೊಳ್ಳದ ವಿದ್ಯುದಾಗಾರಗಳಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ನಿರೀಕ್ಷಿಸುವುದು ಕಷ್ಟಸಾಧ್ಯ. 140 ದಿನಗಳವರೆಗೆ ಮಾತ್ರ ಉತ್ಪಾದನೆ ಮಾಡಬಹುದು.
ಪ್ರಸ್ತುತ ಎಷ್ಟು ವಿದ್ಯುತ್ ಉತ್ಪಾದನೆ:
ಶರಾವತಿ ವಿದ್ಯುದಾಗಾರ -1038 ಮೆಗಾವ್ಯಾಟ್.
ಮಹಾತ್ಮ ಗಾಂಧಿ ವಿದ್ಯುದಾಗಾರ- 139.20 ಮೆಗಾವ್ಯಾಟ್.
ಲಿಂಗನಮಕ್ಕಿ ವಿದ್ಯುದಾಗಾರ- 55 ಮೆಗಾವ್ಯಾಟ್.
ಗೇರುಸೂಪ್ಪ ವಿದ್ಯುದಾಗಾರ- 240 ಮೆಗಾವ್ಯಾಟ್.
ಒಟ್ಟು -1469.20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.
ಲಿಂಗನಮಕ್ಕಿ ಜಲಾಶಯದ ಮುಖ್ಯ ಎಂಜನಿಯರ್ ಪ್ರತಿಕ್ರಿಯೆ: ಲಿಂಗನಮಕ್ಕಿ ಸಂಪೂರ್ಣ ಮಳೆ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದರಿಂದ ನೀರು ಅತಿ ಮುಖ್ಯವಾಗುತ್ತದೆ. ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಮುಂದೆ ಮಳೆ ಬರುವ ನಿರೀಕ್ಷೆ ಇಲ್ಲ. ಇದರಿಂದ ಹಂತಹಂತವಾಗಿ ವಿದ್ಯುತ್ ಉತ್ಪಾದನೆ ಮುಂದಿನ ದಿನಗಳಲ್ಲಿ ಸ್ಥಗಿತವಾಗಲಿದೆ ಎಂದು ಲಿಂಗನಮಕ್ಕಿ ಜಲಾಶಯ ವಿದ್ಯುತ್ ಉತ್ಪಾದನೆಯ ಮುಖ್ಯ ಎಂಜಿನಿಯರ್ ಉದಯ್ ನಾಯಕ್ ಈಟಿವಿ ಭಾರತಕ್ಕೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೌರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ಅಗತ್ಯ: ಮಳೆ ಕೊರತೆಯಿಂದ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಅರಣ್ಯನಾಶ ಸಹ ಮಳೆ ಕೊರತೆಗೆ ಕಾರಣವಾಗಿದೆ. ಇದರಿಂದ ರಾಜ್ಯದಲ್ಲಿ ಮುಂದೆ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಸೌರ ವಿದ್ಯುತ್‌ಗೆ ಹೆಚ್ಚಿನ ಒತ್ತನ್ನು ಸರ್ಕಾರ ನೀಡಬೇಕಿದೆ. ಪ್ರತಿ ಮನೆಯಲ್ಲೂ ಸೌರ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಉತ್ಪಾದಿಸುವ ಅವಕಾಶ ಕಲ್ಪಿಸಬೇಕಿದೆ. ಅಲ್ಲದೆ ಸರ್ಕಾರಿ ಕಟ್ಟಡಗಳ ಮೇಲೆ ಸೌರಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸಲು ಅವಕಾಶ ಮಾಡಿಕೊಡಬೇಕಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಅಖಿಲೇಶ್ ಚಿಪ್ಲಿ.
ಕುಡಿಯುವ ನೀರಿನ ಸಮಸ್ಯೆ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೇಗ ಡೆಡ್ ಸ್ಟೋರೇಜ್ ತಲುಪಲಿದೆ. ಸಾಗರ, ಕಾರ್ಗಲ್-ಜೋಗ ಭಾಗದಲ್ಲಿ ಸಮಸ್ಯೆ ಎದುರಾಗಲಿದೆ. ಇದರಿಂದ ಸರ್ಕಾರ ತಕ್ಷಣ ಕುಡಿಯುವ ನೀರಿನ ಬಗ್ಗೆ ಯೋಚಿಸಬೇಕಿದೆ. ನೀರಿನ ಕೊರತೆ ಉಂಟಾದರೆ ಹಿನ್ನೀರಿನ ಪ್ರದೇಶದಲ್ಲಿ ಸಂಚರಿಸುವ ಲಾಂಚ್ಗಳಿಗೆ ಓಡಾಡಲು ಸಂಕಷ್ಟ ಎದುರಾಗಲಿದೆ. ಇದರಿಂದ ಜಲ ಸಂಪರ್ಕದಲ್ಲಿರುವ ಗ್ರಾಮಗಳು ಸಮಸ್ಯೆಗೆ ಒಳಗಾಗುತ್ತವೆ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: ಹಿಂಗಾರು ಹಂಗಾಮಿಗೆ ರಸಗೊಬ್ಬರಗಳ ಮೇಲೆ ₹22,303 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಒಪ್ಪಿಗೆ